News Kannada
Sunday, September 25 2022

ಕರ್ನಾಟಕ

ಕೊಡಗಿನಲ್ಲಿ ಹೆಚ್‍ಐವಿ ಸೋಂಕಿತರ ಪ್ರಮಾಣ ಶೇ.0.5 ಕ್ಕೆ ಇಳಿಕೆ - 1 min read

Photo Credit :

ಕೊಡಗಿನಲ್ಲಿ ಹೆಚ್‍ಐವಿ ಸೋಂಕಿತರ ಪ್ರಮಾಣ ಶೇ.0.5 ಕ್ಕೆ ಇಳಿಕೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ ಮಾರಕ ರೋಗ ಹೆಚ್‍ಐವಿ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಪ್ರಸ್ತುತ ಶೇ.0.5 ರಷ್ಟು ಸೋಂಕಿತರು ಇದ್ದಾರೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆನಂದ್ ಎನ್. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008 ರಲ್ಲಿ ಸಾಮಾನ್ಯರಲ್ಲಿ ಶೇ. 4 ರಷ್ಟಿದ್ದ ಹೆಚ್‍ಐವಿ ಸೋಂಕಿತರ ಪ್ರಮಾಣ ಪ್ರಸಕ್ತ ಸಾಲಿನಲ್ಲಿ ಶೇ.0.4 ಕ್ಕೆ ಇಳಿದಿದ್ದರೆ, ಗರ್ಭಿಣಿಯರಲ್ಲಿ 0.28 ರಷ್ಟಿದ್ದ ಪ್ರಮಾಣ ಇದೀಗ 0.06ಗೆ ಇಳಿಕೆಯಾಗಿದೆಯೆಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಹೆಚ್‍ಐವಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ 2009 ರಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಎಆರ್ ಟಿ ಕೇಂದ್ರವನ್ನು ಆರಂಭಿಸಲಾಗಿದ್ದು, ಇದುವರೆಗೆ ಈ ಕೇಂದ್ರದಲ್ಲಿ 2095 ಹೆಚ್‍ಐವಿ ಸೋಂಕಿತರು ನೋಂದಾಯಿಸಲ್ಪಟ್ಟಿದ್ದು, ಪ್ರಸಕ್ತ 1687 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಕೊಡಗು ಜಿಲ್ಲೆಯಲ್ಲಿ 7 ಇಐಡಿಪಿ ಪರೀಕ್ಷಾ ಕೇಂದ್ರಗಳಿದ್ದು, ಹೆಚ್‍ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ ಶಿಶುವಿನ ಶೀಘ್ರ ತಪಾಸಣಾ ಕೇಂದ್ರಗಳಲ್ಲಿ 2011 ರಿಂದ ಹೆಚ್‍ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ ಮಕ್ಕಳಲ್ಲಿ 6 ವಾರದಿಂದ 18 ತಿಂಗಳ ವರೆಗಿನ 109 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ 5 ಮಕ್ಕಳಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ. ತಾಲ್ಲೂಕುವಾರು ಹೆಚ್‍ಐವಿ ಸೋಂಕಿತರ ಅಂಕಿ ಅಂಶಗಳ ಅನ್ವಯ ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 8 , ಸೋಮವಾರಪೇಟೆ ತಾಲ್ಲೂಕಿನಲ್ಲಿ 27, ವೀರಾಜಪೇಟೆ ತಾಲ್ಲೂಕಿನಲ್ಲಿ 50 ಮಂದಿಯಲ್ಲಿ ಹಾಗೂ ಇತರೆ ಜಿಲೆಗಳಿಂದ ಬಂದಿರುವ 21 ಮಂದಿಯಲ್ಲಿ ಹೆಚ್‍ಐವಿ ಸೋಂಕು ಇರುವುದು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 994 ಮಹಿಳಾ ಲೈಂಗಿಕ ಕಾರ್ಯಕರ್ತೆಯರು ಹಾಗೂ ಸುಮಾರು 196 ಮಂದಿ ಪುರುಷರೊಂದಿಗೆ ಲೈಂಗಿಕ ಸಂಪರ್ಕವಿರುವವರು ನೋಂದಾಯಿಸಲ್ಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಏಡ್ಸ್ ನಿಂದ 415 ಮಂದಿಯ ಸಾವು- ಏಡ್ಸ್ ನಿಯಂತ್ರಣ ಕಾರ್ಯಕ್ರಮ ಆರಂಭವಾದಲ್ಲಿಂದ ಇಲ್ಲಿಯವರೆಗೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್‍ಐವಿ ಸೋಂಕಿಗೆ ಒಳಗಾದವರಲ್ಲಿ ಒಟ್ಟು 415 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 284 ಮಂದಿ ಪುರುಷರು, 127 ಮಹಿಳೆಯರು ಹಾಗೂ 4 ಮಕ್ಕಳು ಸೇರಿದ್ದಾರೆ. ಕಳೆದ 2018-19 ನೇ ಸಾಲಿನಲ್ಲಿ ಒಟ್ಟು 64 ಮಂದಿ ಸಾವಿಗೀಡಾಗಿದ್ದಾರೆಂದು ಪ್ರಶ್ನೆಯೊಂದಕ್ಕೆ ಡಾ.ಆನಂದ್ ಉತ್ತರಿಸಿದರು.

ಡಿ.2 ರಂದು ಏಡ್ಸ್ ದಿನಾಚರಣೆ: ಪ್ರಸಕ್ತ ಸಾಲಿನಲ್ಲಿ ‘ಸಮುದಾಯಗಳು ಬದಲಾವಣೆಯನ್ನು ಉಂಟುಮಾಡುತ್ತವೆ’ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದ್ದು, ಡಿ.2 ರಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಡಾ. ಆನಂದ್ ತಿಳಿಸಿದರು.

ಅಂದು ಪೂರ್ವಾಹ್ನ 9.30 ಕ್ಕೆ ಮಡಿಕೇರಿಯ ಕೋಟೆ ಆವರಣದಿಂದ ಏಡ್ಸ್ ಜಾಗೃತಿ ಜಾಥ ನಡೆಯಲಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಜಾಥ ಉದ್ಘಾಟಿಸಲಿದ್ದಾರೆ. ಪೂರ್ವಾಹ್ನ 11 ಗಂಟೆಗೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದು, ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಶಾಸಕರಾದ ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತ ಅಧ್ಯಕ್ಷ ನೆಲ್ಲಚಂಡ ಟಿ. ಕಿರಣ್ ಕಾರ್ಯಪ್ಪ, ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ರಾಮಚಂದ್ರ ಕಾಮತ್, ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆÀಂದು ವಿವರಿಸಿದರು.

See also  ಎನ್ ಕೌಂಟರ್ ನಲ್ಲಿ 3 ಮಹಿಳೆಯರು ಸೇರಿ 7 ನಕ್ಸಲರು ಬಲಿ

‘ಮಿಷನ್ ಇಂದ್ರ ಧನುಷ್’ ಅಭಿಯಾನ: ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಗೋಪಿನಾಥ್ ಎಸ್. ಅವರು, ‘ಮಿಷನ್ ಇಂದ್ರ ಧನುಷ್’ ಅಭಿಯಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈಗಾಗಲೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಮೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನೀಡಿ, ಲಸಿಕೆ ಪಡೆಯದೆ ಇರುವ 33 ಗರ್ಭಿಣಿಯರು, 2 ವರ್ಷದೊಳಗಿನ 410 ಮಕ್ಕಳನ್ನು ಗುರುತಿಸಲಾಗಿದೆ. ಇದಕ್ಕಾಗಿ 179 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, 2 ಮೊಬೈಲ್ ತಂಡಗಳು 23 ಕಡೆಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಡಿ.2 ರಿಂದ ಒಂದು ವಾರದ ಕಾಲ ಈ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಇದೇ ರೀತಿ ಮುಂದಿನ ಮಾರ್ಚ್‍ವರೆಗೆ ಪ್ರತಿ ತಿಂಗಳ ಮೊದಲ ವಾರ ಲಸಿಕೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಡಿ.12 ರಂದು ಶಾಲಾ ಲಸಿಕಾ ಕಾರ್ಯಕ್ರಮ: ಇತ್ತೀಚಿನ ವರ್ಷಗಳಲ್ಲಿ ಕೊಡಗು ಸೇರಿದಂತೆ ರಾಷ್ಟ್ರದ ವಿವಿಧೆಡೆÉಗಳಲ್ಲಿ ಗಂಟಲು ಮಾರಿಯಂತಹ ಮಾರಕ ರೋಗಗಳು ಮತ್ತೆ ಕಾಣಿಸಿಕೊಂಡಿರುವ ಹಿನ್ನೆಲೆ ಮಕ್ಕಳಲ್ಲಿ ಬರುವ ವಿವಿಧ ರೀತಿಯ 10 ಮಾರಕ ರೋಗಗಳಿಗೆ ಲಸಿಕೆಯನ್ನು ನೀಡುವ ‘ಮಿಷನ್ ಇಂದ್ರ ಧನುಷ್’ಅಭಿಯಾನದಡಿಯಲ್ಲೇ ಶಾಲಾ ಲಸಿಕಾ ಅಭಿಯಾನವನ್ನು ಡಿ.12 ರಿಂದ 30 ರವರೆಗೆ ನಡೆಸಲಾಗುವುದು. ಈ ಕಾರ್ಯಕ್ರಮದಡಿ 1 ನೇ ತರಗತಿ ಮಕ್ಕಳಿಗೆ ಡಿಪಿಟಿ ಲಸಿಕೆ, 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಟಿಡಿ ಲಸಿಕೆಯನ್ನು ಶಾಲೆಗಳಲ್ಲಿ ನೀಡಲಾಗುತ್ತದೆ ಎಂದು ಡಾ. ಗೋಪಿನಾಥ್ ತಿಳಿಸಿದರು.

ಮಕ್ಕಳಲ್ಲಿ ಕಂಡು ಬರಬಹುದಾದ ಮಾರಣಾಂತಿಕ ರೋಗಗಳಾದ ಪೋಲಿಯೋ , ಹೆಪಟೈಟಸ್ ಬಿ, ಬಾಲ ಕ್ಷಯ, ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯು, ನ್ಯುಮೋನಿಯಾ, ದಡಾರ, ರುಬೆಲ್ಲ, ಮೆದುಳು ಜ್ವರಗಳಿಂದ ರಕ್ಷಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಕೊಡಗು ಜಿಲ್ಲೆಯಲ್ಲಿ 22,106 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು