ಮಡಿಕೇರಿ: ಪದವಿ ಪೂರ್ವ ಶಿಕ್ಷಣಾ ಇಲಾಖೆಯ ಉಪನ್ಯಾಸಕರು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಕೂಡಲೇ ವೇತನ ಬಿಡುಗಡೆಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕಳೆದ ಹಲವು ವರ್ಷಗಳಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೇತನ ತಾರತಮ್ಯ ಹೋಗಲಾಡಿಸುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು, ದ್ವೀತಿಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ನಡೆಸಿದ 18 ದಿವಸಗಳ ಹೋರಾಟದ ಸಂದರ್ಭದಲ್ಲಿ ಸರ್ಕಾರವು ನಡೆಸಿದ ವಿವಿಧ ಹಂತಗಳ ಸಭೆಗಳಲ್ಲಿ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಬೇಡಿಕೆಗಳು ಈಡೇರಿಲ್ಲ ಎಂದು ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಉಪನ್ಯಾಸಕರ ಸಮುದಾಯದಿಂದಲೇ ಬಂದ ಕೆಲ ಅಧಿಕಾರಿಗಳು ಅದೇ ಸಮುದಾಯಕ್ಕೆ ಕಂಟಕವಾಗಿರುವುದು ದುರಾದೃಷ್ಟಕರ. ಈ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಇರುವ ಉನ್ನತ ಅಧಿಕಾರಿಗಳ ದಿಕ್ಕು ತಪ್ಪಿಸಿ, ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸಿ, ಉಪನ್ಯಾಸಕರ ಮನೋಸ್ಥೈರ್ಯ ಕುಸಿಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಸಂದರ್ಭ ಸಂಘದ ಅಧ್ಯಕ್ಷ ಫಿಲಿಪ್ ವಾಸ್, ಕಾರ್ಯಾಧ್ಯಕ್ಷ ಟಿ.ಪ್ರೇಮ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಜೆ.ನಾಗರಾಜ್, ಕೋಶಾಧ್ಯಕ್ಷ ಹೆಚ್.ಆರ್.ಸರ್ವೋತ್ತಮ್, ಗೌರವಾಧ್ಯಕ್ಷರಾದ ಅಶ್ವಿನಿಕುಮಾರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗಪ್ಪ, ಪ್ರಧಾನ ಕಾರ್ಯದರ್ಶಿ ರುದ್ರಪ್ಪ, ಮಡಿಕೇರಿ ತಾಲ್ಲೂಕು ಕಾರ್ಯಾಧ್ಯಕ್ಷ ಕೃಷ್ಣ, ಪ್ರಧಾನ ಕಾರ್ಯದರ್ಶಿ ಚಿದಾನಂದ, ಖಜಾಂಚಿ ರವಿಶಂಕರ್, ವಿರಾಜಪೇಟೆ ತಾಲ್ಲೂಕು ಕಾರ್ಯಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ವಿವೇಕ್, ಖಜಾಂಚಿ ರೀಟಾ ಆಲ್ವಾರಿಸ್ ಮತ್ತಿತರರು ಹಾಜರಿದ್ದರು.