ಮಡಿಕೇರಿ: ರೋಟರಿ ಸಂಸ್ಥೆ, ಕೊಡಗು ಶಿಕ್ಷಣ ನಿಧಿ, ಮಂಗಳೂರು ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ನಿರ್ವಹಣೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ‘ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮವು ನಗರದ ಕೊಡವ ಸಮಾಜದಲ್ಲಿ ಶುಕ್ರವಾರ ನಡೆಯಿತು.
ಶಿಕ್ಷಣ ತಜ್ಞ ಡಾ.ನಾರಾಯಣ ಅವರು ಮಾತನಾಡಿ, ಸರಿಯಾದ ಮಾರ್ಗದರ್ಶನದಿಂದ ಗುರಿ ತಲುಪಬಹುದು. ವೃತ್ತಿಯನ್ನು ಸರಿಯಾಗಿ ಆಯ್ಕೆಮಾಡಿದರೆ ಒಳ್ಳೆಯ ಹೆಸರು ಜೊತೆಗೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ಕೌಶಲ್ಯ ಮತ್ತು ಪ್ರತಿಭೆ ಇವೆರಡು ವಿಭಿನ್ನ. ಹವ್ಯಾಸವನ್ನು ಕೂಡ ವೃತ್ತಿಯಾಗಿ ರೂಪಿಸಿಕೊಳ್ಳಬಹುದು. ಮಕ್ಕಳು ಅವರ ಸಾಮಥ್ರ್ಯಕ್ಕೆ ಮತ್ತು ಆಸಕ್ತಿಗೆ ಸರಿಹೊಂದುವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ವಿಭಿನ್ನವಾದ ಆಯ್ಕೆ ಮತ್ತು ಅವಕಾಶಗಳಿವೆ, ಇಂದಿನ ದಿನಗಳು ಜ್ಞಾನದ ಮತ್ತು ಸಂಯೋಜಕ ಪ್ರಪಂಚ. ಆದ್ದರಿಂದ ವಿದ್ಯಾರ್ಥಿಗಳು ತುಂಬ ಜ್ಞಾನ ಹೊಂದಿ ಸಮಾಜಕ್ಕೆ ಒಳ್ಳೆಯದನ್ನು ಮಾಡಿ ಎಂದು ಅವರು ಹೇಳಿದರು.
ಕೊಡಗು ಶೈಕ್ಷಣಿಕ ನಿಧಿಯ ಟ್ರಸ್ಟಿ ಕೆ.ಕೆ.ತಿಮ್ಮಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ಕನಸು ಕಾಣುವುದು ಮಾತ್ರವಲ್ಲದೆ, ನನಸು ಮಾಡಲು ಪರಿಶ್ರಮದಿಂದ ಓದಬೇಕು ಎಂದರು.
ವಿದ್ಯಾರ್ಥಿಗಳಿಗೆ ವೃತ್ತಿಪರ ಜ್ಞಾನವನ್ನು ಪೋಷಕರು ಕಲಿಸಿದರೆ, ಗುರುಗಳು ವೃತ್ತಿಪರ ವಿದ್ಯೆ ಕಲಿಸುತ್ತಾರೆ. ಒಡಹುಟ್ಟಿದವರ ಮತ್ತು ಸ್ನೇಹಿತರ ಸಲಹೆ ಪಡೆದು ಮಾರ್ಗದರ್ಶನ ಪಾಲಿಸಿ. ಮೊಬೈಲ್ ಮತ್ತು ಕಂಪ್ಯೂಟರ್‍ಗಳನ್ನು ಸಾಮಾನ್ಯ ಜ್ಞಾನವನ್ನು ಬೆಳೆಸಲು ಉಪಯೋಗಿಸಿಕೊಳ್ಳಿ ಎಂದು ಅವರು ಹೇಳಿದರು.
ರವೀಂದ್ರ ಭಟ್ ಅವರು ಮಾತನಾಡಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭೆ ಹೊಂದಿರುತ್ತಾರೆ. ಅದಕ್ಕೆ ಪೂರ್ವ ತಯಾರಿ ಅಗತ್ಯ. ಆ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ಪಡೆಯುವುದು ಅಗತ್ಯ ಎಂದರು.
ವೃತ್ತಿಪರ ಜ್ಞಾನ ಮತ್ತು ಶಿಕ್ಷಣ ಪಡೆಯಬೇಕು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ನಂತರ ಮುಂದೇನು ಎಂಬ ಬಗ್ಗೆ ತಿಳಿದುಕೊಂಡಿರಬೇಕು. ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ನಿರ್ದೇಶಕರಾದ ಈಶ್ವರ ಭಟ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆದರೆ ಯಶಸ್ಸು ತಲುಪಬಹುದು. ಆ ನಿಟ್ಟಿನಲ್ಲಿ ಸಮಯ ವ್ಯರ್ಥ ಮಾಡದೆ ಓದಿನ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಅವರು ಸಲಹೆ ಮಾಡಿದರು.
ತೆರಿಗೆ ಇಲಾಖೆಯ ಮೈಸೂರು ಜಿಲ್ಲಾ ಉಪ ಆಯುಕ್ತರಾದ ರಮೇಶ್ ನರಸಯ್ಯ ಅವರು ಮಾತನಾಡಿ ಯುಪಿಎಸ್‍ಸಿ, ಕೆಪಿಎಸ್‍ಸಿ, ಎಸ್‍ಎಸ್‍ಸಿ, ಬ್ಯಾಂಕಿಂಗ್ ಇವುಗಳಿಗೆ ಪ್ರಚಲಿತ ವಿದ್ಯಮಾನ ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚು ತಿಳಿದುಕೊಳ್ಳಬೇಕು. ನಾಗರಿಕ ಸೇವಾ ಪರೀಕ್ಷೆ, ರಾಷ್ಟ್ರೀಯ ರಕ್ಷಣಾ ಅಕಾಡಮಿ, ಸಂಯೋಜಿತ ರಕ್ಷಣಾ ಸೇವೆ, ಭಾರತೀಯ ಅರಣ್ಯ ಸೇವೆ, ಕೇಂದ್ರ ಪೊಲೀಸ್ ಪಡೆಗಳಿಗೆ ಸೇರಲು ಬೇಕಾದ ಅರ್ಹತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷರಾದ ರತನ್ ತಮ್ಮಯ್ಯ, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಜಗನ್ನಾಥ್, ರೋಟರಿ ಸುರೇಶ್ ಚಂಗಪ್ಪ, ಡಾ.ಪಾಟ್ಕರ್, ವಿಜೇಂದ್ರ, ಶಿಕ್ಷಕರು ಮತ್ತು ಇತರರು ಪಾಲ್ಗೊಂಡಿದ್ದರು.