ಕಾಸರಗೋಡು: ಜಿಲ್ಲೆಯ ಕನ್ನಡಿಗರ ಸಹಿತ ಭಾಷಾ ಅಲ್ಪಸಂಖ್ಯಾತರ ಅಹವಾಲು ಸ್ವೀಕಾರ ನಡೆಸಲು ಆಗಮಿಸಿರುವ ರಾಜ್ಯ ಮಟ್ಟದ ವಿಶೇಷ ಅಧಿಕಾರಿ ನಡುವಟ್ಟಂ ಗೋಪಾಲಕೃಷ್ಣನ್ ಅವರು ನಡೆಸುತ್ತಿರುವ ಅಹವಾಲು ಸ್ವೀಕಾರ ಸಭೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರಂಭಗೊಂಡಿದೆ.
ಮೂಲಭೂತವಾಗಿ ಇಲ್ಲಿನ ಸ್ಥಳೀಯ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವಿಧ ಸಂಗಟನೆಗಳ ಪ್ರತಿನಿಧಿಗಳು ಅಹವಾಲುಗಳನ್ನು ಸಲ್ಲಿಸಿದರು. ಹಿರಿಯ, ಯುವ, ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಗುರುವಾರ ನಡೆದ ಸಭೆಯಲ್ಲಿ ಹಾಜರಾಗಿ, ಮನವಿಗಳನ್ನು ಸಲ್ಲಿಸುವುದರ ಜೊತೆಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಇಲ್ಲಿನ ಸಮಸ್ಯೆಗಳನ್ನು ಅವರಿಗೆ ಮನದಟ್ಟು ಮಾಡಿಕೊಟ್ಟರು.
ಇಲ್ಲಿನ ಜನತೆಯ ಮೂಲಭೂತ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಸಿಯಲಾಗುತ್ತಿರುವ ಬಗ್ಗೆ ಅಧಿಕಾರಿ ನಡುವಟ್ಟಂ ಗೋಪಾಲಕೃಷ್ಣನ್ ಕಳಕಳಿ ವ್ಯಕ್ತಪಡಿಸಿದರು. ಅನೇಕ ವಿಚಾರಗಳನ್ನು ಕೇಳಿ ತಿಳಿದುಕೊಂಡರು. ಜೊತೆಗೆ ತಾವು ನ್ಯಾಯಾಂಗ ಅಧಿಕಾರವಿರುವ ಅಧಿಕಾರ ಹೊಂದದೇ ಇದ್ದರೂ, ಈ ಎಲ್ಲ ಸಮಸ್ಯೆಗಳನ್ನು ರಾಜ್ಯ ಸರಕಾರಕ್ಕೆ ವರದಿ ಮೂಲಕ ಸಲ್ಲಿಸಿ, ಪರಿಹಾರಕ್ಕೆ ಗರಿಷ್ಠ ಮಟ್ಟದಲ್ಲಿ ಯತ್ನಿಸುವೆ ಎಂದು ಭರವಸೆಯನ್ನು ನೀಡಿದರು.
ಈ ಸಂದರ್ಭ ಮಾತನಾಡಿದ ನಡುವಟ್ಟಂ ಗೋಪಾಲಕೃಷ್ಣನ್ ಅವರು ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರದೇ ಇರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಭಾಷೆ ಎಂಬ ಸಾಲಿಗೆ ಸೇರದೇ ಹೋಗಿದೆ. ಅಲ್ಪಸಂಖ್ಯಾತ ಪಟ್ಟಿಯಲ್ಲಿ ಸೇರಿಕೊಂಡ ಭಾಷೆಗೆ ಸಹಜವಾಗಿಯೇ ಹಕ್ಕುಗಳು ಬರುತ್ತವೆ. ಕನ್ನಡ ಈಗಾಗಲೇ ಈ ಸಾಲಿನಲ್ಲಿದೆ. ಕೊಂಕಣಿಯನ್ನು ಈ ಪಟ್ಟಿಯಲ್ಲಿ ಸೇರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯ ಕನ್ನಡ ಪ್ರದೇಶಗಳ ಕಚೇರಿಗಳಲ್ಲಿ ಕಡ್ಡಾಯ ಮಲೆಯಾಳಂ ಕಲಿಕೆ ಹೇರಿಕೆಗೊಳಿಸಬಾರದು, ಆಸಕ್ತರು ಕಲಿಯುವುದಿದ್ದರೆ ಸಮಸ್ಯೆಯಿಲ್ಲ. ಅರ್ಜಿಗಳು, ಶುಲ್ಕ ರಶೀದಿ ಇತ್ಯಾದಿಗಳು ಕನ್ನಡದಲ್ಲಿ ಸಿಗದೇ ಇರುವ, ಸಾರ್ವಜನಿಕರು ಕನ್ನಡದಲ್ಲಿ ಅರ್ಜಿ ಸಲ್ಲಿಸದ ವೇಳೆ ಕಚೇರಿ ಸಿಬ್ಬಂದಿ ಅದನ್ನು ನಿರ್ಲಕ್ಸ್ಯದಿಂದ ಕಾಣುವ, ಫಲಕಗಳು ಕನ್ನಡದಲ್ಲಿ ಇಲ್ಲದೇ ಇರುವ, ಗ್ರಾಮಪಂಚಾಯತ್ ಗಳಲ್ಲಿ ಮಿನಿಟ್ಸ್ ಗಳನ್ನು ಮಲೆಯಾಳಂನಲ್ಲೇ ಬರೆಯುವ. “ಕನ್ನಡ ಬಲ್ಲ” ಕೆಳದರ್ಜೆ ಗುಮಾಸ್ತ ನೇಮಕ ಪರೀಕ್ಷೆಯಲ್ಲಿ ಮಲೆಯಾಳಂನಲ್ಲೇ ಪ್ರಶ್ನೆ ಪತ್ರಿಕೆ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಾಂಗ ಅಧಿಕಾರ ಹೊಂದಿರುವ ಅಧಿಕಾರಿಗಳು ಆಗಮಿಸಿ ಭಾಷಾ ಅಲ್ಪಸಂಖ್ಯಾತರ ಮನವಿ ಸ್ವೀಕರಿಸಿ, ಅದರ ಶಾಶ್ವತ ಪರಿಹಾರ ಒದಗಿಸಬೇಕು, ಕಾಸರಗೋಡು, ಮಂಜೇಶ್ವರ ತಾಲೂಕು ಮಟ್ಟದಲ್ಲಿ ಸರಕಾರಿ ಕಚೇರಿಗಳಲ್ಲಿ ಸ್ಥಳೀಯ ನಿವಾಸಿಗಳೇ ನೇಮಕಗೊಳ್ಳಬೇಕು, ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆ ನಡೆಸಿದವರಿಗೆ ನೇಮಕಾತಿ ಒದಗಿಸಬೇಕು, ಜಿಲ್ಲೆಯ ಅಧಿಕಾರ ಸ್ಥಾನಗಳಲ್ಲಿರುವ ಸಿಬ್ಬಂದಿ ಕನ್ನಡಿಗರೇ ಇರಬೇಕು ಎಂಬ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು, ಪ್ರತಿ ಕಚೇರಿ ಭಾಷಾಂತರ ವ್ಯವಸ್ಥೆ ಇರಬೇಕು, ಐ.ಸಿ.ಡಿ.ಎಸ್. ಸೂಪರ್ ವೈಸರ್ಗಳ 20 ಹುದ್ದೆಗಳಲ್ಲಿ ಕನ್ನಡಡಿಗರನ್ನೇ ನೇಮಕಾತಿ ನಡೆಸಬೇಕು, ಕಂದಾಯ ದಾಖಲಾತಿಗಳಲ್ಲಿ ರೀಸರ್ವೇ ನಡೆಸಿದ ಎಲ್ಲ ದಾಖಲೆಗಳೂ ಮಲೆಯಾಳಂನಲ್ಲೇ ಇವೆ. ಅವನ್ನು ಕನ್ನಡದಲ್ಲಿ ಒದಗಿಸಬೇಕು, ಹತ್ತನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತ ಮಕ್ಕಳಿಗೆ ಮುಂದಿನ ಶಿಕ್ಷವೂ ಕನ್ನಡದಲ್ಲೇ ಸಿಗುವಂತಾಗಬೇಕು, ಮಾಯಿಪ್ಪಾಡಿ ಡಯಟ್ ನಲ್ಲಿ ಕನ್ನಡ ಭಾಷಾ ಶಿಕ್ಷಕರನ್ನು ತಕ್ಷಣ ನೇಮಿಸಬೇಕು ಇತ್ಯಾದಿ ಬೇಡಿಕೆಗಳು ಬಹುಪಾಲು ರೂಪದಲ್ಲಿ ಸಲ್ಲಿಕೆ ಗೊಂಡಿತ್ತು.