ನಾಗಮಂಗಲ: ಯುವಕನ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣದ ತನಿಖೆ ನಡೆಸಿದ ಪಟ್ಟಣ ಠಾಣೆ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ, ಕಾರೊಂದನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ನಿವಾಸಿ ಶಬರೀಶ್, ಮಹೇಶ್ ಅಲಿಯಾಸ್ ಬಾಂಡ್ಲಿ ಎಂಬುವರೇ ಬಂಧಿತ ಆರೋಪಿಗಳಾಗಿದ್ದು, ಇವರು ಯುವಕನನ್ನು ಅಪಹರಿಸಿ ಹಣ ಸಿಗದಿದ್ದಾಗ ಯುವಕನನ್ನು ಆತನ ಮನೆ ಬಳಿ ಬಿಟ್ಟು ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಕಾರು ಚಾಲಕ ದೀಪು ಅಲಿಯಾಸ್ ಟೈಗರ್‍ಗಾಗಿ ಬಲೆ ಬೀಸಲಾಗಿದೆ.
ಪಟ್ಟಣದ 6ನೇ ವಾರ್ಡ್ ಪುರಸಭೆ ಸದಸ್ಯ ತಿಮ್ಮಪ್ಪ ಎಂಬುವರ ಮಗ ಎನ್.ಟಿ. ಮಿಥುನ್(23) ಎಂಬಾತನನ್ನು ಆರೋಪಿಗಳು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.
ಮೈಸೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್.ಟಿ. ಮಿಥುನ್ ಕಳೆದ ನ. 22ರಂದು ರಾತ್ರಿ 8 ಗಂಟೆ ಸಮಯದಲ್ಲಿ ನಾಗಮಂಗಲಕ್ಕೆ ಬರುತ್ತಿದ್ದಂತೆ ಆರೋಪಿಗಳಾದ ಶಬರಿ ಮತ್ತು ಸಂತೋಷ್ ಪಟ್ಟಣದ ಟಿ. ಮರಿಯಪ್ಪ ವೃತ್ತದ ಬಳಿ ಕಾದು ನಿಂತು ಶ್ರೀರಂಗಪಟ್ಟಣದ ಪೂಜಾರಿ ಫಿಷ್‍ಲ್ಯಾಂಡ್‍ನಲ್ಲಿ ನಿನ್ನ ಸ್ನೇಹಿತರಿದ್ದು, ನಿನ್ನನ್ನು ಕರೆತರುವಂತೆ ನಮಗೆ ತಿಳಿಸಿದ್ದಾರೆಂದು ಹೇಳಿ ಮಿಥುನ್‍ನನ್ನು ಕಾರಿನಲ್ಲಿ ಅಪಹರಿಸಿದ್ದರು. ಬಳಿಕ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಸೇರಿದಂತೆ ಹಲವೆಡೆ ಸುತ್ತಾಡಿಸಿ, ಬನ್ನೂರಿನಲ್ಲಿರುವ ಆರೋಪಿ ಶಬರೀಶನ ತಾತನ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರೆನ್ನಲಾಗಿದೆ.
ಮರುದಿನ ಬೆಳಗ್ಗೆ ಮಿಥುನ್‍ನನ್ನು ಮಂಡ್ಯಕ್ಕೆ ಕರೆತಂದು, ನಿನ್ನ ಪೋಷಕರಿಗೆ ಕರೆ ಮಾಡಿ 30 ಲಕ್ಷ ರೂ. ಹಣ ಕೊಡಿಸಬೇಕು. ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಜೀವಬೆದರಿಕೆ ಹಾಕಿದ್ದಾರೆ. ಬಳಿಕ ಮಧ್ಯಾಹ್ನದ ವೇಳೆಗೆ ತಾಲೂಕಿನ ಮಂಡ್ಯ ರಸ್ತೆಯ ದೇವಲಾಪುರ ಹ್ಯಾಂಡ್ ಪೋಸ್ಟ್‍ಗೆ ಕರೆತಂದು ಮಿಥುನ್ ಮೊಬೈಲ್‍ನಿಂದಲೇ ಪೋಷಕರಿಗೆ ಕರೆ ಮಾಡಿಸಿ ಬೆದರಿಕೆ ಹಾಕಿ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಮಗ ಅಪಹರಣವಾಗಿರುವ ಸುದ್ಧಿ ತಿಳಿಯುತ್ತಿದ್ದಂತೆ ಕಂಗಾಲಾದ ಪೋಷಕರು 30 ಲಕ್ಷ ರೂ. ತಲುಪಿಸುವುದಾಗಿ ಭರವಸೆ ನೀಡಿದರು. ಪೋಷಕರ ಭರವಸೆ ಮೇರೆಗೆ ಆರೋಪಿಗಳು ನ. 23ರ ಮಧ್ಯಾಹ್ನ ಅಪಹರಣಕ್ಕೊಳಗಾಗಿದ್ದ ಮಿಥುನ್‍ನನ್ನು ಅವರ ಮನೆ ಬಳಿ ಬಿಟ್ಟು ಹೋಗಿದ್ದರು. ಮಗ ಮನೆಗೆ ಬಂದಿದ್ದನ್ನು ಕಂಡು ಪೋಷಕರು ನಿಟ್ಟುಸಿರು ಬಿಟ್ಟರು. ಮುಂದೆ ಏನಾಗುವುದೋ ಎಂಬ ಚಿಂತೆಯಲ್ಲಿದ್ದರು.
ಎರಡು ದಿನಗಳು ಕಳೆದರೂ ಹಣ ಆರೋಪಿಗಳ ಕೈ ಸೇರಿದ ಹಿನ್ನೆಲೆಯಲ್ಲಿ ನ. 24ರಂದು ತಿಮ್ಮಪ್ಪ ಅವರ ಮನೆಗೆ ಬಂದ ಪ್ರಕರಣದ ಪ್ರಮುಖ ಆರೋಪಿ ಶಬರಿ, ನಿಮ್ಮ ಮಗನನ್ನು ಅಪಹರಿಸಿದ್ದ ದುಷ್ಕರ್ಮಿಗಳು 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಿಮ್ಮ ಮಗ ಹಣ ಕೊಡಿಸುವ ಭರವಸೆ ನೀಡಿದ್ದಾನೆ. ಹಾಗಾಗಿ ನೀವು ಕೊಡುವ ಹಣದಲ್ಲಿ ನನಗೆ 5 ಲಕ್ಷ ರೂ. ಕಮೀಷನ್ ಸಿಗಲಿದೆ. ಆದ್ದರಿಂದ 30 ಲಕ್ಷ ರೂ. ಹಣ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾನೆ. ನೀವು ಹಣ ಕೊಡದಿದ್ದರೆ ನಾನೇನೂ ನಿಮ್ಮ ಮಗನಿಗೆ ತೊಂದರೆ ಕೊಡುವುದಿಲ್ಲ. ಬದಲಿಗೆ ಅವನಿಗೆ ಬೇರೆಯವರು ಏನಾದರೂ ತೊಂದರೆ ಮಾಡಿದರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ತಿಳಿಸಿದ್ದಾನೆ. ಇದರಿಂದ ಆತಂಕಗೊಂಡ ಪೋಷಕರು ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಶಬರೀಶ್ ಮತ್ತು ಆತನ ಸಹಚರ ಮಹೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ನಾಗಮಂಗಲ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.