ಶಿವಮೊಗ್ಗ: ಹೈದರಾಬಾದ್ ನಲ್ಲಿ ಬುಧವಾರ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಸುಟ್ಟು ಹಾಕಿ ಕೊಲೆ ನಡೆಸಿರುವ ಕಾಮುಕರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಬಿಜೆಪಿ ಶಿವಮೊಗ್ಗ ನಗರ ಘಟಕ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಮೂಲಕ ತೆಲಂಗಾಣ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ರಾಜಾಸ್ಥಾನದ ಜೈಪುರದ 15 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ನಡೆದಿರುವ ಈ ಘಟನೆ ಆಂಧ್ರದ ಹಾಗೂ ದೇಶದ ಜನ ತಲೆ ತಗ್ಗಿಸುವಂತೆ ಮಾಡಿದೆ. ಯುವತಿಯ ಮೇಲೆ ಅತ್ಯಾಚಾರ ನಡೆಸಿ ಸುಟ್ಟುಹಾಕಿದ ಆರೋಪಿಗಳನ್ನ ತಕ್ಷಣವೇ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಹಿಳಾ ಅತ್ಯಾಚಾರ-ದೌರ್ಜನ್ಯ ಪ್ರಕರಣಗಳ ತಾರ್ಕಿಕ ಮತ್ತು ತ್ವರಿತ ಇತ್ಯಾರ್ಥಕ್ಕೆ ವಿಶೇಷ ನ್ಯಾಯಾಲಯ ರಚಿಸಬೇಕು. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕು. ಮಹಿಳೆಯರು ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ನೂತನ ತಂತ್ರಜ್ಞಾನವನ್ನು ಪೊಲೀಸರು ಯೋಚಿಸಬೇಕು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಹಂಗಾಮಿ ಮೇಯರ್ ಲತಾಗಣೇಶ್, ಉಪಮೇಯರ್ ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಇ.ವಿಶ್ವಾಸ್, ಸುರೇಖಾ ಮುರುಳೀಧರ್, ಆರತಿ ಪ್ರಕಾಶ್, ಪಕ್ಷದ ಮುಖಂಡರಾದ ಹಿರಣಯ್ಯ, ಸಂತೋಷ್ ಬಳ್ಳೇಕೆರೆ ಮೊದಲಾದವರು ಭಾಗವಹಿಸಿದ್ದರು.