ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಚಾಮರಾಜನಗರ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ಆಂಜನೇಯ ದೇವಸ್ಥಾನವನ್ನು ತೆರವುಗೊಳಿಸುವಂತೆ ನ್ಯಾಯಾಲಯವು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಗುಂಡ್ಲುಪೇಟೆ -ಚಾಮರಾಜನಗರ ಹೆದ್ದಾರಿಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ತೆರವು ಕುರಿತಂತೆ ವಿವಾದ ಸೃಷ್ಠಿಯಾಗಿತ್ತು. ಹೀಗಾಗಿ ಈ ದೇಗುಲದ ಕುರಿತಂತೆ ಖಾಸಗಿ ಹಾಗೂ ಪುರಸಭೆ ಆಸ್ತಿ ಎಂದು ದಾಖಲಾಗಿರುವುದಿಲ್ಲ ಎಂದು ಗುಂಡ್ಲುಪೇಟೆ ಪುರಸಭೆ ಮುಖ್ಯಾಧಿಕಾರಿ ವರದಿ ಸಲ್ಲಿಸಿದ್ದರು. ಆದರೆ ಆಂಜನೇಯ ದೇವಸ್ಥಾನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು ಮತ್ತು ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿರುವುದೆಂದು ಗುಂಡ್ಲುಪೇಟೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ವರದಿ ಸಲ್ಲಿಸಿದ್ದರು.
ಈ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ರಸ್ತೆ ಬದಿಯಲ್ಲಿ ಅನಧಿಕೃತವಾಗಿ ದೇವಸ್ಥಾನ ನಿರ್ಮಿಸಿರುವುದರಿಂದ ಅದನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ. ಇದೀಗ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸಂಬಂಧಪಟ್ಟ ಅಧಿಕಾರಿಗೆ ಆದೇಶಿಸಿದ್ದಾರೆ.