ಮಡಿಕೇರಿ: ನದಿಯನ್ನು ಸ್ವಚ್ಛವಾಗಿಟ್ಟುಕೊಂಡು ಪಾವಿತ್ರ್ಯತೆಯನ್ನು ಕಾಪಾಡುವ ಮೂಲ ಚಿಂತನೆಗಳಡಿ ವಾಣಿಜ್ಯ ನಗರಿ ಕುಶಾಲನಗರದಲ್ಲಿ ‘ಕಾವೇರಿ ನದಿ ಹಬ್ಬ-2019’ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಗಮನ ಸೆಳೆಯಿತು.
ಕುಶಾಲನಗರದ ಕಾವೇರಿ ರಿವರ್ ಸೇವಾ ಟ್ರಸ್ಟ್, ಕಾವೇರಿ ಮಹಾ ಆರತಿ ಬಳಗ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯ ಕಾವೇರಿ ನದಿ ತಟದಲ್ಲಿ ಹಮ್ಮಿಕೊಂಡಿದ್ದ ಕಾವೇರಿ ನದಿ ಹಬ್ಬ-2019 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಉಪನ್ಯಾಸ ನೀಡಿದ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಮನುಷ್ಯನ ಸ್ವಾರ್ಥ, ಅನಾಗರೀಕ ಚಟುವಟಿಕೆಗಳಿಂದ ನದಿಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನದಿಗಳ ಅಸ್ತಿತ್ವ ಉಳಿದಲ್ಲಿ ಮಾತ್ರ ಸಂಸ್ಕೃತಿ, ನಾಗರೀಕತೆ ಉಳಿದುಕೊಳ್ಳಲು ಸಾಧ್ಯ. ಆದ್ದರಿಂದ ಇಂದಿನ ಯುವ ಸಮೂಹ ನದಿಗಳ ರಕ್ಷಕರಾಗಬೇಕಿದೆ ಮತ್ತು ಜೀವನದಿ ಕಾವೇರಿಯನ್ನು ಗೌರವದಿಂದ ಕಾಣುವಂತಹ ಮನಸ್ಥಿತಿ ನಿರ್ಮಾಣವಾಗಬೇಕಿದೆ ಎಂದರು.
ಭೂ ಸರ್ವೇಕ್ಷಣ ಇಲಾಖೆ ನಿವೃತ್ತ ಉಪ ಮಹಾ ನಿರ್ದೇಶಕ ಎಚ್.ಎಸ್.ಎನ್.ಪ್ರಕಾಶ್ ಮಾತನಾಡಿ, ಕಾವೇರಿ ನದಿ ಹಬ್ಬ ಎಂಬ ವಿನೂತನ ಕಾರ್ಯಕ್ರಮದ ಮೂಲಕ ನದಿಗಳ ಸಂರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು. ಇದೇ ಸಂದರ್ಭ ‘ನಮಾಮಿ ಕಾವೇರಿ’ ಸ್ಮರಣ ಸಂಚಿಕೆಯನ್ನು ಅನಾವರಣ ಮಾಡಲಾಯಿತು.
ಜಾಗೃತಿ ಜಾಥ-ಕಾರ್ಯಕ್ರಮಕ್ಕೂ ಮುನ್ನ ಕಾವೇರಿ ನದಿ ನೀರಿನ ಸಂರಕ್ಷಣೆಗಾಗಿ ಪಟ್ಟಣದ ಶಾಲಾ ಕಾಲೇಜಿನ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥ ನಡೆಯಿತು.
ಶಿಲನ್ಯಾಸ-ಪೂರ್ವಾಹ್ನ ನಡೆದ ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ನದಿ ತಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆರತಿ ಕ್ಷೇತ್ರಕ್ಕೆ ಶಿಲಾನ್ಯಾಸ ಮಾಡಿದರು.
ಮಹಾ ಆರತಿ- ಸಂಜೆ ಕಾವೆರಿ ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಲಾಯಿತು.ಕಾರ್ಯಕ್ರಮದಲ್ಲಿ ಅಮ್ಮತ್ತಿಕನ್ನೆ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.