ಮಡಿಕೇರಿ: ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಹಾಗೂ ಸಹಾಯಕಿಯರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಸುನಂದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ಉದಾರೀಕರಣ ನೀತಿಗಳ ಮೂಲಕ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಖಾಸಗಿ ಮಾಡಲು ಹೊರಟ್ಟಿದ್ದು, ಈ ಬೆಳವಣಿಗೆಯಿಂದ ಮಹಿಳಾ ನೌಕರರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿರುವ ಪ್ರಮುಖ ಜವಬ್ದಾರಿಗಳನ್ನು ಬೇರೆಡೆಗೆ ವರ್ಗಾಯಿಸುವ ಮೂಲಕ ಯೋಜನೆಗಳನ್ನು ಬಲಹೀನಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಸಾವಿರಾರು ಮಹಿಳೆಯರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಎಂದರು.
ಪೂರ್ವ ಪ್ರಾಥಮಿಕ ಶಿಕ್ಷಣವ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ವಿವಿಧ ಬೇಡಿಕೆಗಳ ಬಗ್ಗೆ ಹಲವು ಬಾರಿ ಸಂಬಂಧಿಸಿದವರೊಂದಿಗೆ ಚರ್ಚಿಸಿ ಮನವಿ ಪತ್ರ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಸುನಂದ ಟೀಕಿಸಿದರು. ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನದ ಮೂಲಕ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಜಾಥಾ ನಡೆಸಲಾಗುತ್ತಿದೆ. ಡಿ.10 ರಂದು ಅಂಗನವಾಡಿ ಸಿಬ್ಬಂದಿಗಳು ಬೆಂಗಳೂರಿಗೆ ಪಾದಯಾತ್ರೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದರು.