ಕಾರವಾರ: ಯಲ್ಲಾಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಗೆಲುವು ಖಚಿತ ಎಂದು ಕ್ಷೇತ್ರದ ಉಪ ಚುನಾವಣೆ ಉಸ್ತುವಾರಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಭೀಮಣ್ಣ 14 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದರು.
ಕಾಂಗ್ರೆಸ್ ನಿಂದ ಬಿಜೆಪಿಗೆ ಯಾರು ಪಕ್ಷಾಂತರ ಮಾಡಿದ್ದಾರೋ ಅವರು ಸೋತಿದ್ದಾರೆ. ಆ ಗಾಳಿ ಇಂದು ಕರ್ನಾಟಕದಲ್ಲಿ ಬೀಸುತ್ತಿದೆ. ಅಧಿಕಾರ, ಹಣದ ಆಸೆಯಿಂದ ಯಾರು ಪಕ್ಷಾಂತರ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಲೇ ಬೇಕು. ಅನರ್ಹ ಶಾಸಕರು ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿ ನಾಯಕರು ಈಗಾಗಲೇ ಸೋತಿದ್ದಾರೆ. ಆ ಕಾರಣದಿಂದ ಕೊನೆಯ ಅಸ್ತ್ರವಾಗಿ ಹಣ ಮತ್ತು ಹೆಂಡ ಹಂಚಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆದ್ದರಿಂದ ಕ್ಷಣಿಕ ಸುಖಕ್ಕಾಗಿ ಮತದಾರ ಆಮೀಷಕ್ಕೆ ಒಳಗಾಗಬಾರದು ಎಂದರು.
ಉಪ ಚುನಾವಣೆಯಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗಳಿಸುತ್ತದೆ. ಸ್ಥಿರ ಸರ್ಕಾರ ಕೊಡಲು ಶಕ್ತಿ ಇದ್ದರೆ ಸರ್ಕಾರ ರಚನೆ ಮಾಡಬೇಕು. ಕೇವಲ ಚೀಫ್ ಮಿನಿಸ್ಟರ್ ಮಂತ್ರಿ ಮಾಡಲು ಸರ್ಕಾರ ಆಗಬಾರದು. ಚುನಾವಣೆ ನಂತರ ಕಾಂಗ್ರೆಸ್ ಜೆಡಿಎಸ್ ಹೆಚ್ಚು ಸ್ಥಾನ ಬಂದಲ್ಲಿ ಸ್ಥಿರ ಸರ್ಕಾರ ಮಾಡಲು ಶಕ್ತಿ ಇದ್ದರೆ ಮಾಡಬೇಕು ಇಲ್ಲವಾದರೆ ಚುನಾವಣೆಗೆ ಹೋಗಬೇಕು ಎಂದರು. 22 ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾಳಾಗಿದೆ. ಅಡಿಕೆ, ಭತ್ತ, ಶುಂಠಿ, ಬಾಳೆ, ಹತ್ತಿ ನಷ್ಟವಾಗಿ ಸಾವಿರಾರು ಕೋಟಿ ನಷ್ಟವಾಗಿದೆ. ಆದರೆ ಪರಿಹಾರ ಬಿಡುಗಡೆ ಆಗಿಲ್ಲ. ಯಾರೊಬ್ಬರಿಗೂ ಬೆಳೆ ಪರಿಹಾರ ಬಂದಿಲ್ಲ. ಸರ್ಕಾರ ಉಳಿಸುವ ಪ್ರಯತ್ನದಲ್ಲಿ ಆಡಳಿತ ಸ್ಥಗಿತಗೊಂಡಿದೆ. ರೈತರಿಗೆ, ಬಡವರಿಗೆ, ಕೂಲಿಕಾರರಿಗೆ ಸಹಾಯ ಆಗುತ್ತಿಲ್ಲ. ಬಜೆಟ್ ನಲ್ಲಿ ಹಣ ಇದ್ದರೂ ಸಾಲಮನ್ನಾಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಿ.ಎಫ್.ನಾಯ್ಕ, ಸುನೀಲ್ ನಾಯ್ಕ, ಜಗದೀಶ ಗೌಡ ಇದ್ದರು.