News Kannada
Sunday, September 25 2022

ಕರ್ನಾಟಕ

‘ಕೂರ್ಗ್ ವಿಲೇಜ್’ ಕಾಮಗಾರಿ ಸ್ಥಗಿತಕ್ಕೆ ಎಂ.ಸಿ.ನಾಣಯ್ಯ ಆಗ್ರಹ - 1 min read

Photo Credit :

‘ಕೂರ್ಗ್ ವಿಲೇಜ್’ ಕಾಮಗಾರಿ ಸ್ಥಗಿತಕ್ಕೆ ಎಂ.ಸಿ.ನಾಣಯ್ಯ ಆಗ್ರಹ

ಮಡಿಕೇರಿ: ನಗರದ ರಾಜಾಸೀಟ್ ಉದ್ಯಾನವನದ ಬಳಿ ನೈಜ ಪ್ರಕೃತಿಗೆ ವಿರುದ್ಧವಾಗಿ ನಿರ್ಮಾಣಗೊಳ್ಳುತ್ತಿರುವ ‘ಕೂರ್ಗ್ ವಿಲೇಜ್’ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂದು ಒತ್ತಾಯಿಸಿರುವ ಮಾಜಿ ಸಚಿವ ಎಂ.ಸಿ.ನಾಣಯ್ಯ, ಈ ಯೋಜನೆಗಾಗಿ ಖರ್ಚು ಮಾಡುತ್ತಿರುವ ಅನುದಾನವನ್ನು ರಾಜಾಸೀಟ್ ಉದ್ಯಾನವನದಲ್ಲಿ ಪರಿಸರ ಸ್ನೇಹಿ ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ನಾಲ್ಕು ಮಂದಿಯ ಸ್ವಾರ್ಥಕ್ಕಾಗಿ ಸಹಸ್ರಾರು ಮಂದಿಯ ಹಿತಾಸಕ್ತಿಯನ್ನು ಬಲಿಕೊಡಲಾಗುತ್ತಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ನಡೆಯುತ್ತಿರುವ ಸುಮಾರು 1.25 ಏಕರೆ ಪ್ರದೇಶ ಕೆಲ ದಶಕಗಳ ಹಿಂದೆ ನಮ್ಮ ಮೇರಿಯಂಡ ಕುಟುಂಬಸ್ಥರಿಂದ 1.60 ಲಕ್ಷ ರೂ.ಗಳಿಗೆ ವಶಕ್ಕೆ ಪಡೆದ ಸರ್ಕಾರ, ತೋಟಗಾರಿಕೆ ಇಲಾಖೆ ಮೂಲಕ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಇಲ್ಲಿರುವ ಕೆರೆಯಿಂದ ರಾಜಾಸೀಟ್ ಉದ್ಯಾನವನದ ಗಿಡಗಳಿಗೆ ನೀರನ್ನು ಹಾಯಿಸುವುದು ಮತ್ತು ಕೆರೆ ಇರುವ ಪ್ರದೇಶದಲ್ಲಿ ಸಸಿಗಳ ಅಭಿವೃದ್ಧಿಗಾಗಿ ಈ ಜಾಗವನ್ನು ಮೀಸಲಿಡಲಾಗಿತ್ತು. ಆದರೆ, ಇತ್ತೀಚಿನ ದಿಢೀರ್ ಬೆಳವಣಿಗೆಯಲ್ಲಿ ಈ ಹಸಿರ ಪರಿಸರವನ್ನು ಕಾಂಕ್ರಿಟೀಕರಣಗೊಳಿಸಲಾಗುತ್ತಿದೆ. ಕೂರ್ಗ್ ವಿಲೇಜ್ ಎನ್ನುವ ಹೆಸರಿನಲ್ಲಿ ಸುಮಾರು 15ಕ್ಕೂ ಹೆಚ್ಚಿನ ಗೂಡಂಗಡಿಗಳನ್ನು ನಿರ್ಮಿಸುವ ಮೂಲಕ ಸ್ವಚ್ಛ ಪರಿಸರವನ್ನು ಕೊಳಗೇರಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಎಂ.ಸಿ.ನಾಣಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಯೋಜನೆಯನ್ನು ಕೈಗೊಂಡಿರುವ ಪ್ರದೇಶವು ಪ್ರಾಚ್ಯ ವಸ್ತು ಇಲಾಖೆಯ ಅಧೀನಕ್ಕೆ ಒಳಪಡುವ ರಾಜಾಸೀಟ್ ಉದ್ಯಾನವನದ ಬಳಿಯೇ ಇದೆ. ಪ್ರಾಚ್ಯ ವಸ್ತು ಇಲಾಖೆಯ ನಿಯಮದ ಪ್ರಕಾರ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಆದರೆ, ಇಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಾಂಕ್ರಿಟ್ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದು ಹಸಿರ ಪರಿಸರಕ್ಕೆ ವಿರುದ್ಧವಾದ ಮತ್ತು ಜಲ ಮೂಲಕ್ಕೆ ಧಕ್ಕೆ ತರಬಹುದಾದ ಯೋಜನೆಯಾಗಿರುವುದರಿಂದ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಸಬೇಕೆಂದು ನಾಣಯ್ಯ ಒತ್ತಾಯಿಸಿದರು.

ಈ ಯೋಜನೆಗಾಗಿ ಖರ್ಚು ಮಾಡುತ್ತಿರುವ ಅನುದಾನವನ್ನು ರಾಜಾಸೀಟ್ ಉದ್ಯಾನವನದಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ‘ಪಾತ್ ವೇ’ ಯನ್ನು ನಿರ್ಮಿಸಲು ವಿನಿಯೋಗಿಸಬೇಕೆಂದು ಸಲಹೆ ನೀಡಿದರು. ಒಂದು ವೇಳೆ ಕೂರ್ಗ್ ವಿಲೇಜ್ ಯೋಜನೆಯನ್ನು ಕೈಬಿಡದಿದ್ದಲ್ಲಿ ನಗರದ ಜನತೆ ತೀವ್ರ ರೀತಿಯ ಹೋರಾಟವನ್ನು ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಕೆಲವು ಕಾಣದ ಕೈಗಳು ಜಿಲ್ಲಾಧಿಕಾರಿಗಳ ಹಾದಿ ತಪ್ಪಿಸುತ್ತಿದ್ದು, ಪರಿಸರ ವಿರೋಧಿ ಮತ್ತು ಅವೈಜ್ಞಾನಿಕ ಕಾಮಗಾರಿಗಳಿಗೆ ಪ್ರಚೋದನೆ ನೀಡುತ್ತಿವೆ. ಕೂರ್ಗ್ ವಿಲೇಜ್ ಕಾಮಗಾರಿಯ ಗುತ್ತಿಗೆಯನ್ನು ನಿರ್ಮಿತಿ ಕೇಂದ್ರ ಪಡೆದಿದ್ದು, ಬಿಹಾರದ ಕಾರ್ಮಿಕರು ಕಟ್ಟಡ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿದ ಕಟ್ಟಡಗಳೆಲ್ಲವು ಗುಣಮಟ್ಟವಿಲ್ಲದೆ, ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ಇದೊಂದು ಲೂಟಿಕೋರ ಸಂಸ್ಥೆಯಾಗಿದೆಯೆಂದು ಆರೋಪಿಸಿದ ನಾಣಯ್ಯ, ಜಿಲ್ಲೆಯಲ್ಲಿ ಈ ಸಂಸ್ಥೆಯಿಂದ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆಯೆಂದು ಸಂಶಯ ವ್ಯಕ್ತಪಡಿಸಿದರು. ನಿರ್ಮಿತಿ ಕೇಂದ್ರದ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸುವುದಾಗಿ ಇದೇ ಸಂದರ್ಭ ತಿಳಿಸಿದ ಅವರು, ಈ ಸಂಸ್ಥೆ ನಡೆಸಿದ ಎಲ್ಲಾ ವ್ಯವಹಾರಗಳ ಬಗ್ಗೆ ವಿಶೇಷ ಲೆಕ್ಕಪರಿಶೋಧನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.

See also  ಡಾ.ಅಂಬೇಡ್ಕರ್ ಘನತೆಗೆ ದಕ್ಕೆ : ಕಾಂಗ್ರೆಸ್ ವಕ್ತಾರ ಸುರೇಶ್ ಆರೋಪ

ಕೂರ್ಗ್ ವಿಲೇಜ್ ಯೋಜನೆಯ ಪರ ಹೇಳಿಕೆ ನೀಡುತ್ತಿರುವವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಎಂ.ಸಿ.ನಾಣಯ್ಯ, ಮಡಿಕೇರಿಯ ನೈಜ ಪ್ರಾಕೃತಿಕ ಸೌಂದರ್ಯ ಇಂತಹವರಿಂದಲೆ ನಾಶವಾಗುತ್ತಿದೆಯೆಂದು ಟೀಕಿಸಿದರು. ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲೆಯನ್ನು ಪ್ರವೇಶಿಸಿ ಅನಾರೋಗ್ಯಕರ ಪ್ರವಾಸೋದ್ಯಮವನ್ನು ಸೃಷ್ಟಿಸಿ ಬೆಟ್ಟ ಗುಡ್ಡಗಳನ್ನು ನಾಶಮಾಡುತ್ತಿರುವ ವಲಸಿಗರಿಂದ ಮೂಲ ನಿವಾಸಿಗಳು ಪರಕೀಯರಾಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು. ಪರಿಸರ ಮತ್ತು ಪ್ರವಾಸೋದ್ಯಮ ಎರಡು ಸಮಾನವಾಗಿ ಅಭಿವೃದ್ಧಿ ಹೊಂದಬೇಕೆಂದು  ಅಭಿಪ್ರಾಯಪಟ್ಟ ನಾಣಯ್ಯ, ಜಿಲ್ಲೆಯ ಜನ ಪರಿಸರ ನಾಶದ ವಿರುದ್ಧ ಎಚ್ಚೆತ್ತು ಕೊಳ್ಳಬೇಕೆಂದರು.

ಕಳೆದ ವರ್ಷ ಮಡಿಕೇರಿ ತಾಲ್ಲೂಕು  ವ್ಯಾಪ್ತಿಯಲ್ಲಿ ಮಹಾಮಳೆಯಿಂದ ಉಂಟಾದ ಹಾನಿಗೆ ಭೂಗರ್ಭ ಶಾಸ್ತ್ರಜ್ಞರ ವರದಿಯಂತೆ ಬೆಟ್ಟ ಗುಡ್ಡಗಳನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ನಾಶಗೊಳಿಸಿರುವುದು ಶೇ.30ರಷ್ಟು ಕಾರಣವೆಂದು ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಹೋಂ ಸ್ಟೇಗಳಿದ್ದು, ಕೇವಲ 500 ರಿಂದ 600 ಹೋಂ ಸ್ಟೇಗಳು ನೋಂದಣಿಯಾಗಿವೆ. ಅನೇಕ ಹೋಂ ಸ್ಟೇಗಳಲ್ಲಿ ಮೋಜು ಮಸ್ತಿ, ಜೂಜಾಟ, ರೇವ್ ಪಾರ್ಟಿ ಮತ್ತು ವೇಶ್ಯಾವಾಟಿಕೆಯ ದಂಧೆಗಳು ಕೂಡ ನಡೆಯುತ್ತಿದೆ ಎಂದು ಎಂ.ಸಿ.ನಾಣಯ್ಯ ಆರೋಪಿಸಿದರು. ತಕ್ಷಣ ಜಿಲ್ಲಾಡಳಿತ ಅನಧಿಕೃತ ಹೋಂ ಸ್ಟೇಗಳಿಗೆ ಬೀಗ ಜಡಿಯಬೇಕೆಂದು ಒತ್ತಾಯಿಸಿದರು.

ಕೊಡಗು ಜಿಲ್ಲೆಗೆ ಪರಿಸರ ಸ್ನೇಹಿ ಪ್ರವಾಸೋದ್ಯಮ ಬೇಕೆ ಹೊರತು ಮೋಜು ಮಸ್ತಿಯ ಪ್ರವಾಸೋದ್ಯಮ ಬೇಡವೆಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು