ಮಡಿಕೇರಿ: ರಾಷ್ಟ್ರದ ಏಕತೆ, ಅಖಂಡತೆಗೆ ಬಲಿದಾನಗೈದ ವೀರಯೋಧರಿಗೆ ಗೌರವ ನಮನ ಸಲ್ಲಿಸುವ ಮೂಲಕ ನಗರದ ಸನ್ನಿಸೈಡ್‍ನ ಯುದ್ಧ ಸ್ಮಾರಕದಲ್ಲಿ ‘ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ’ ಅರ್ಥಪೂರ್ಣವಾಗಿ ನಡೆಯಿತು.
ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಇಲಾಖೆ ವತಿಯಿಂದ ‘ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ’ಯು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನ ಆವರಣದ ಯುದ್ಧ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಕರ್ನಲ್(ನಿವೃತ್ತ) ಎನ್.ಸಿ.ನಂಜಪ್ಪ, ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ, ಬ್ರಿಗೇಡಿಯರ್(ನಿವೃತ್ತ) ಮುತ್ತಣ್ಣ, ಕರ್ನಲ್(ನಿವೃತ್ತ) ಕೆ.ಸಿ.ಸುಬ್ಬಯ್ಯ, ಕರ್ನಲ್(ನಿವೃತ್ತ) ನಂಜಪ್ಪ, ಕ್ಯಾಪ್ಟನ್(ನಿವೃತ್ತ) ಸುಬ್ಬಯ್ಯ, ಡಿವೈಎಸ್‍ಪಿ ದಿನೇಶ್ ಕುಮಾರ್, ಲೆ.ಕ.(ನಿವೃತ್ತ) ಗೀತಾ ಮತ್ತು ನಿವೃತ್ತ ಸೈನಿಕರು ಯುದ್ದ ಸ್ಮಾರಕಕ್ಕೆ ಪುಷ್ಪಗುಚ್ಚವಿಟ್ಟು ಗೌರವ ನಮನ ಸಲ್ಲಿಸಿದರು.
ಪೊಲೀಸ್ ತುಕಡಿಯಿಂದ ಮೂರು ಸುತ್ತು ಕುಶಾಲತೋಪುಗಳನ್ನು ಹಾರಿಸಿ ಯುದ್ದ ಸ್ಮಾರಕಕ್ಕೆ ಗೌರವ ಸಲ್ಲಿಸಲಾಯಿತು. ಹಾಗೂ ಎರಡು ನಿಮಿಷಗಳ ಮೌನಾಚರಿಸಲಾಯಿತು.
ಮುಖ್ಯ ಅತಿಥಿಗಳು 2019 ರ ಸಶಸ್ತ್ರ ಪಡೆಗಳ ಧ್ವಜಗಳನ್ನು ಬಿಡುಗಡೆಗೊಳಿಸಿದರು. ಸಾರ್ವಜನಿಕರಿಗೆ ಹಾಗೂ ಗಣ್ಯ ವ್ಯಕ್ತಿಗಳಿಗೆ ದ್ವಜಧಾರಣೆ ಮಾಡಲಾಯಿತು.
ಮಾಜಿ ಸೈನಿಕರು, ನಿವೃತ್ತ ಸೇನಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರು, ಪೊಲೀಸ್ ಕವಾಯತು ತುಕಡಿ, ಪೊಲೀಸ್ ಬ್ಯಾಂಡ್ ಸಿಬ್ಬಂದಿಗಳು ಮತ್ತು ಎನ್‍ಸಿಸಿ ಮಕ್ಕಳು ಮತ್ತು ಇತರರು ಪಾಲ್ಗೊಂಡಿದ್ದರು.
ಅಸಾಧರಣ ಧೈರ್ಯ, ಅಪ್ರತಿಮ ಶೌರ್ಯ, ಸಾಹಸಕ್ಕೆ ಹೆಸರಾದ ಭಾರತೀಯ ಸೇನಾ ಪಡೆಗಳಿಗೆ ದೇಶದ ಸಮಗ್ರತೆ ಮತ್ತು ನಾಗರಿಕರ ಜೀವ ರಕ್ಷಣೆಯೇ ಪರಮ ಧ್ಯೇಯವಾಗಿದೆ ಎಂದು ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಗೀತಾ ಅವರು ತಿಳಿಸಿದರು.