News Kannada
Thursday, December 08 2022

ಕರ್ನಾಟಕ

ಡಿ.11ರಂದು ಚಿಕ್ಕಬೆಟ್ಟಗೇರಿಯಲ್ಲಿ ಸಿಎನ್‍ಸಿಯಿಂದ ಕೊಡಗಿನ ಸುಗ್ಗಿ ಹಬ್ಬ ಪುತ್ತರಿ ಆಚರಣೆ

Photo Credit :

ಡಿ.11ರಂದು ಚಿಕ್ಕಬೆಟ್ಟಗೇರಿಯಲ್ಲಿ ಸಿಎನ್‍ಸಿಯಿಂದ ಕೊಡಗಿನ ಸುಗ್ಗಿ ಹಬ್ಬ ಪುತ್ತರಿ ಆಚರಣೆ

ಮಡಿಕೇರಿ: ಕೊಡಗಿನ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ವತಿಯಿಂದ ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿಯನ್ನು ಡಿ.11ರಂದು ಚಿಕ್ಕಬೆಟ್ಟಗೇರಿಯ ನಂದಿನೆರವಂಡ ಉತ್ತಪ್ಪ ಅವರ ಭತ್ತದ ಗದ್ದೆಯಲ್ಲಿ ಸಾರ್ವತ್ರಿಕವಾಗಿ ಆಚರಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ ಹಾಗೂ ಸಂಸ್ಕೃತಿ ಉಳಿಯಬೇಕಾದರೆ ಆಯಾ ಪ್ರದೇಶದ ಹಬ್ಬ ಹರಿದಿನಗಳನ್ನು ಸಾರ್ವತ್ರಿಕವಾಗಿ ಆಚರಿಸುವಂತಾಗಬೇಕು. ಆ ಮೂಲಕ ಜಗತ್ತಿನ ಗಮನಸೆಳೆಯುವಂತಾಗಬೇಕು ಎಂದು ಅಭಿಪ್ರಾಯಿಸಿದರಲ್ಲದೆ, ಅದರಂತೆ ಸಿಎನ್‍ಸಿ ಸಂಘಟನೆಯು ಕೊಡವ ಬುಡಕಟ್ಟು ಜಗತ್ತಿನ ಸಂಸ್ಕೃತಿಯ ಪ್ರಧಾನ ಹಬ್ಬವಾದ ‘ಪುತ್ತರಿ’ಯನ್ನು ಕಳೆದ 26 ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸುತ್ತಾ ಬಂದಿದ್ದು, ಕೊಡವರ ಉನ್ನತ ಪರಂಪರೆ ಹಾಗೂ ಶ್ರೇಷ್ಟ ಸಂಸ್ಕೃತಿಯನ್ನು ಸಾರುವ ಮೂಲಕ ಭೂತಾಯಿಗೂ ಕೊಡವರಿಗೂ ಇರುವ ಅವಿನಾಭಾವ ಸಂಬಂಧವನ್ನು ಜಗತ್ತಿಗೆ ಪರಿಚಯಿಸುತ್ತಿದೆ ಎಂದು ಹೇಳಿದರು.

ನ.11 ರಂದು ಪೂರ್ವಾಹ್ನ 10:30 ಗಂಟೆಗೆ ಕುಶಾಲನಗರ ಹೋಬಳಿ ಚಿಕ್ಕಬೆಟ್ಟಗೇರಿ ಗ್ರಾಮದ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಕದಿರು ತೆಗೆಯುವ ಕೈಂಕರ್ಯ ತನ್ನ ಮುಂದಾಳತ್ವದಲ್ಲಿ ನಡೆಯಲಿದೆ. ಇದಕ್ಕೂ ಮೊದಲು ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರು ಮತ್ತು ದೇವಾನುದೇವತೆಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿ ಅರಳಿ, ಮಾವು, ಹಲಸು, ಕುಂಬಳಿ ಮತ್ತು   ಗೇರು  ಮರಗಳ ಎಲೆಗಳಿಂದ ನೆರೆಕಟ್ಟುವ ವಿಧಿ ಮುಗಿಸಿ, ಕುತ್ತಿ, ತೋಕ್-ಕತ್ತಿ, ದುಡಿಕೊಟ್ಟ್‍ಪಾಟ್, ತಳಿಯತಕ್ಕಿಯೊಂದಿಗೆ ಮೆರವಣಿಗೆಯಲ್ಲಿ ಭತ್ತದ ಗದ್ದೆಗೆ ತೆರಳಲಾಗುವುದು.  ಗದ್ದೆಯಲ್ಲಿ ಕದಿರು ತೆಗೆದು ಹಿಂದಿರುಗಿ ಬಂದು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಾದ ವಾಲಗತಾಟ್, ಪರಿಯಕಳಿ ಮತ್ತು ಬೊಳಕಾಟ್ ನಡೆಸಿ ತದನಂತರ ಗುರುಕಾರೋಣ- ದೇವಾನುದೇವತೆಗಳಿಗೆ ನೈವೇದ್ಯ ಅರ್ಪಿಸಿ ಕೊಡವ ಸಾಂಪ್ರಾದಾಯಿಕ ಭೋಜನ ಸವಿಯುವ ಮೂಲಕ ಪುತ್ತರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು ಎಂದು ನುಡಿದರು.

ಕೊಡವ ಬುಡಕಟ್ಟು ಜಗತ್ತಿನ ಉನ್ನತ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ತೋರಿಸುವ ಸಲುವಾಗಿ ಮತ್ತು ಮುಂದಿನ ಪೀಳಿಗೆಗೆ ಈ ಪರಂಪರೆಯನ್ನು ಹಸ್ತಾಂತರಿಸುವ ಸಲುವಾಗಿ ಆಚರಿಸಲಾಗುವ ಈ ಹಬ್ಬದ ಸಂದರ್ಭ ನಡೆಸಲಾಗುವ ಸಭಾ ಕಾರ್ಯಕ್ರಮದಲ್ಲಿ ಕೊಡವ ಲ್ಯಾಂಡ್ ಸ್ವಾತಂತ್ರ್ಯ ಅನ್ವೇಷಣೆಯ ತಾರ್ಕಿಕ ಅಂತ್ಯಕ್ಕೆ ತಲುಪಿಸುವ, ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸುವ ಹಾಗೂ ರಾಜ್ಯಾಂಗದ ಶೆಡ್ಯೂಲ್ ಪಟ್ಟಿಗೆ ಕೊಡವ ಬುಡಕಟ್ಟು ಕುಲವನ್ನು ಸೇರಿಸುವ ಸಾಂವಿಧಾನಿಕ ಹೋರಾಟವನ್ನು ಮುಂದುವರೆಸುವ, ಅತ್ಯಂತ ಅಲ್ಪಸಂಖ್ಯಾತ ಕೊಡವ ಬುಡಕಟ್ಟಿನ ಶ್ರೇಷ್ಠ ಸಂಸ್ಕೃತಿಯನ್ನು ವಿಶ್ವ ಸಂಸ್ಥೆಯ ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸುವ ಹಕ್ಕೊತ್ತಾಯವನ್ನು ಪುನರ್‍ಮಂಡಿಸಲಾಗುವುದು ಎಂದು ಹೇಳಿದರು.

ಸಾರ್ವತ್ರಿಕ ರಜೆ ಘೋಷಣೆಗೆ ಆಗ್ರಹ: ಕೊಡಗಿನ ಹುತ್ತರಿ ಹಬ್ಬವರು ಸುಮಾರು 20 ದಿನಗಳ ಕಾಲ ನಡೆಯುವ ಉತ್ಸವವಾಗಿದ್ದು, ಕದಿರು ತೆಗೆಯುವ ಮೊದಲ ಮೂರು ದಿನಗಳು ಸಂಬಂಧಿಸಿದ ಗ್ರಾಮಗಳ ಮಂದ್‍ಗಳಲ್ಲಿ ಸಂಜೆ ಈಡ್ ಉತ್ಸವ ಅಂದರೆ ಆಟ್-ಪಾಟ್‍ನ ಪೂರ್ವ ತಾಲೀಮು, ತದನಂತರ ಕದಿರು ತೆಗೆಯುವ ದಿನ ಪುತ್ತರಿ ಪೌದ್. ಮಾರನೇ ದಿನ ಊರ್‍ಮಂದ್ ಮತ್ತೊಂದು ದಿನ ನಾಡ್‍ಮಂದ್ ಮಗದೊಂದು ದಿನ ಕೇರಿಮಂದ್ ಆ ನಂತರ ಮನೆಪಾಟ್,  ಕೊನೆಗೆ ಊರೊರ್ಮೆ ಕೂಟ ನಡೆಯುತ್ತದೆ. ಈ ಎಲ್ಲಾ ದಿನಗಳು ಅತ್ಯಂತ ಮಹತ್ವದ ದಿನಗಳಾಗಿದ್ದು, ಇದರಲ್ಲಿ ವಿವಿಧೆಡೆಗಳಲ್ಲಿ ನೆಲೆಸಿರುವ ಕೊಡವರು ಭಾಗವಹಿಸಲು ಅನುಕೂಲವಾಗುವಂತೆ ಸರಕಾರ ಕನಿಷ್ಟ 20 ದಿನಗಳ ಸಾರ್ವತ್ರಿಕ ರಜೆ ಘೋಷಿಸುವಂತಾಗಬೇಕು ಎಂದು ನಾಚಪ್ಪ ಆಗ್ರಹಿಸಿದರು.

See also  ಶುದ್ದ ಕುಡಿಯುವ ನೀರಿನ ಘಟಕಗಳ ತಕ್ಷಣ ಸ್ಥಾಪಿಸಲು ಒತ್ತಾಯ

ಕೊಡವ ಬುಡಕಟ್ಟು ಜಗತ್ತಿನ ಪ್ರಧಾನ ಹಬ್ಬವಾದ ಈ ಬಾರಿ ರಾಜ್ಯ ಸರ್ಕಾರ ಅಧಿಕೃತ ಸಾರ್ವತ್ರಿಕ ರಜೆ ಘೋಷಣೆ ಮಾಡಿರುವುದು ಸಿ.ಎನ್.ಸಿ ಯ ಸಾಧನೆಯಾಗಿದೆ ಎಂದು ಹೇಳಿದ ಅವರು, ಇದೇ ಸಂದರ್ಭ ನಾಡಿನ ಜನತೆಗೆ ಹುತ್ತರಿ ಹಬ್ಬದ ಶುಭಾಶಯಗಳನ್ನು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಕೂಪದಿರ ಸಾಬು, ಚೆಂಬಂಡ ಜನತ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು