News Kannada
Thursday, December 01 2022

ಕರ್ನಾಟಕ

ಮಳೆಹಾನಿ ಸಂಕಷ್ಟವನ್ನು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ : ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ - 1 min read

Photo Credit :

ಮಳೆಹಾನಿ ಸಂಕಷ್ಟವನ್ನು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ : ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್

ಮಡಿಕೇರಿ: ಕೊಡಗು ಜಿಲ್ಲೆ ಮತ್ತೆ ಮಹಾಮಳೆಯ ಸಂಕಷ್ಟಕ್ಕೆ ಸಿಲುಕಿದ್ದು, ಜನರ ನೋವಿಗೆ ಸ್ಪಂದಿಸಲು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಸಂಘ, ಸಂಸ್ಥೆಗಳು ಒಗ್ಗೂಡಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.

ಧಾರಾಕಾರ ಮಳೆಯಿಂದ ಪ್ರವಾಹಕ್ಕೆ ಸಿಲುಕಿರುವ ಮತ್ತು ಭೂಕುಸಿತದಿಂದ ಅಪಾಯವನ್ನು ಎದುರಿಸುತ್ತಿರುವ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆ ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿ ಹೋಗಿದ್ದು, ತುರ್ತು ನೆರವಿನ ಅಗತ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ವಿಶೇಷ ಅನುದಾನ ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಬೇಕು. ಜಿಲ್ಲೆಯಲ್ಲಿ ಸಾವಿರಾರು ಎಕರೆ ತೋಟ ಹಾಗೂ ಗದ್ದೆಗಳು ಕೂಡ ಸಂಪೂರ್ಣವಾಗಿ ನಾಶವಾಗಿದ್ದು, ಕೃಷಿಕರಿಗೂ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕೆಂದು ಗಣೇಶ್ ಒತ್ತಾಯಿಸಿದರು.

2019ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರ ನೋವಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಅವರು, ಇದೀಗ ಮತ್ತೆ ಮಹಾಮಳೆಯಿಂದ ಜಿಲ್ಲೆ ಸಂಕಷ್ಟಕ್ಕೆ ಸಿಲುಕಿದ್ದು, ತುರ್ತು ನೆರವಿನ ಅಗತ್ಯವಿದೆ ಎಂದರು. ಪ್ರತಿವರ್ಷ ಕೊಂಡಂಗೇರಿ ಗ್ರಾಮ ಸಂಪೂರ್ಣವಾಗಿ ಜಲಾವೃಗೊಳ್ಳುತ್ತಿದ್ದರೂ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು.

::: ಸಾಮೂಹಿಕ ಪ್ರಾರ್ಥನೆಗೆ ಮನವಿ :::

ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಮಹಾಮಳೆ ಕಾಡುತ್ತಲೇ ಇದೆ. ಯಾವುದೇ ವೈಜ್ಞಾನಿಕ ಕಾರಣಗಳನ್ನು ನೀಡಿದರೂ ಪ್ರಾಕೃತಿಕ ವಿಕೋಪವನ್ನು ತಡೆಯಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ಸಮುದಾಯವೂ ತಮ್ಮ ತಮ್ಮ ಧರ್ಮದ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆದ್ದರಿಂದ ಕೊಡಗಿನಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಪ್ರಾಕೃತಿಕ ವಿಕೋಪಗಳು ನಡೆಯದಂತೆ ಎಲ್ಲಾ ಧರ್ಮೀಯರು ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸುವ ಅಗತ್ಯವಿದೆ ಎಂದು ಗಣೇಶ್ ಹೇಳಿದರು.

ಸರ್ವಧರ್ಮಗಳ ಮುಖಂಡರು ಈ ಬಗ್ಗೆ ಚರ್ಚಿಸಿ ದಿನವೊಂದನ್ನು ಗೊತ್ತು ಮಾಡಿ ಪ್ರಾರ್ಥನೆ ಸಲ್ಲಿಸಬೇಕೆಂದು ಮನವಿ ಮಾಡಿದರು. ಜಿಲ್ಲೆಯ ಶಾಸಕರುಗಳು ಕೂಡ ಕೊಡಗಿನ ಕುಲದೇವಿ ಕಾವೇರಿ ಹಾಗೂ ಮಳೆದೈವ ಪಾಡಿ ಶ್ರೀಇಗ್ಗುತ್ತಪ್ಪ ದೇವರಿಗೆ ಪ್ರತಿವರ್ಷ ಮಳೆಗಾಲ ಆರಂಭವಾಗುವ ಜೂನ್ ತಿಂಗಳಿನಲ್ಲಿ ಪೂಜೆ ಸಲ್ಲಿಸಿ ಯಾವುದೇ ಅನಾಹುತ ಸಂಭವಿಸದಂತೆ ಪ್ರಾರ್ಥಿಸುವ ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಜಲಾವೃತಗೊಂಡಿರುವ ಕೊಂಡಂಗೇರಿ ಗ್ರಾಮ, ಬೇತ್ರಿ, ಬೊಟ್ಲಪ್ಪ ಪೈಸಾರಿ, ಕಡಗಾದಳುವಿನ ತುರ್ಕರಟ್ಟಿ, ಮೂರ್ನಾಡು ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಗಣೇಶ್ ಹಾಗೂ ಜೆಡಿಎಸ್ ಪ್ರಮುಖರು ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು, ಅಲ್ಲದೆ ಆರ್ಥಿಕ ನೆರವು ನೀಡಿದರು.

ಈ ಸಂದರ್ಭ ಕೊಂಡಂಗೇರಿಯ ಸಂತ್ರಸ್ತರೊಬ್ಬರು ಮಾತನಾಡಿ, 2019ರಲ್ಲಿ ಸುರಿದ ಮಹಾಮಳೆಯಿಂದ ಗ್ರಾಮ ಸಂಪೂರ್ಣ ಜಲಾವೃತಗೊಂಡು ಸುಮಾರು 15 ಮನೆಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ ಸಂತ್ರಸ್ತರಿಗೆ ಪರಿಹಾರ ದೊರಕಿಲ್ಲ, ಇದೀಗ ಗ್ರಾಮ ಮತ್ತೆ ಜಲಾವೃತಗೊಂಡಿದೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶಾಶ್ವತ ಪರಿಹಾರಕ್ಕಾಗಿ ಮನವಿ ಮಾಡಿದರು. ಫೋಟೋ :: ಜೆಡಿಎಸ್

See also  ಬೈಕ್- ಕೆಎಸ್ ಆರ್ ಟಿಸಿ ಬಸ್ ಅಪಘಾತ: ಇಬ್ಬರು ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು