ಚಾಮರಾಜನಗರ: ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದುವರೆಗಿನ ಲಾಕ್ ಡೌನ್‍ನಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದು ಮಾಡಲು ಉದ್ಯೋಗವಿಲ್ಲದೆ, ಜನ ಪರದಾಡುತ್ತಿದ್ದರೆ, ಮತ್ತೊಂದೆಡೆ ಕೂಲಿ ಕೆಲಸವೂ ಇಲ್ಲದಾಗಿದೆ. ಹೀಗಾಗಿ ಸಾಲ ಮಾಡಿಕೊಂಡವರು ಅದರಲ್ಲೂ ಖಾಸಗಿ ಮೈಕ್ರೋ ಫೈನಾನ್ಸ್‍ನಲ್ಲಿ ಸಾಲ ಮಾಡಿದವರು ತಿಂಗಳ ಇಎಂಐ ಕಟ್ಟಲಾಗದೆ ಪರದಾಡುವಂತಾಗಿದೆ.
ಈ ಮಧ್ಯೆ ಹಳ್ಳಿಗಳಿಗೆ ತೆರಳುತ್ತಿರುವ ಖಾಸಗಿ ಮೈಕ್ರೋ ಫೈನಾನ್ಸ್‍ನ ಸಿಬ್ಬಂದಿ ಹಣ ವಸೂಲಿ ಮಾಡಲು ಮುಂದಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಗೂ ಸಾಲ ತೆಗೆದುಕೊಂಡ ಮಹಿಳೆಯರ ನಡುವೆ ಜಟಾಪಟಿಗಳು ಆರಂಭವಾಗಿದ್ದು, ಪೊಲೀಸ್ ಠಾಣೆ ವರೆಗೂ ಹೋಗಿವೆ.
ಬೇಗೂರು ಗ್ರಾಮದ ಮಹಿಳೆಯರು ಇಕ್ವಿಟಸ್ ಬ್ಯಾಂಕಿನಿಂದ ಸಾಲ ಪಡೆದು ಮೂರು ನಾಲ್ಕು ಕಂತು ಪಾವಸಿದ್ದರು. ಆದರೆ ಕೋರೊನಾದಿಂದ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಅರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದ ಮಹಿಳೆಯರು ಸಾಲ ಕಟ್ಟಿರಲಿಲ್ಲ. ಹೀಗಾಗಿ ಗ್ರಾಮಕ್ಕೆ ತೆರಳಿದ ಇಕ್ವಿಟಸ್ ಬ್ಯಾಂಕಿನ ಸಿಬ್ಬಂದಿ ಹಣ ವಸೂಲಿಗೆ ಇಳಿದಿದ್ದಾರೆ. ಈ ವೇಳೆ ಮಹಿಳೆಯರಿಗೂ ಮತ್ತು ಬ್ಯಾಂಕ್ ಸಿಬ್ಬಂದಿ ಮಧ್ಯೆ ವಾಗ್ವಾದ ಆರಂಭವಾಗಿದೆ. ಈ ವೇಳೆ ಹಣ ಕಟ್ಟಲು ಸಾಧ್ಯವಾಗದ ಮಹಿಳೆಯರು ಕಾಲಾವಕಾಶಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಲೆಕ್ಕಿಸದೆ ಸಿಬ್ಬಂದಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸಿಬ್ಬಂದಿ ಕಿರುಕುಳ ತಾಳಲಾರದೆ ಬೇಗೂರು ಪೊಲೀಸರಿಗೆ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಬೇಗೂರು ಪಿ.ಎಸ್.ಐ. ಲೋಕೇಶ್ ಮಹಿಳೆಯರ ದೂರು ಸ್ವೀಕರಿಸಿ ಸಂಬಂಧಪಟ್ಟ ಬ್ಯಾಂಕಿನ ಸಿಬ್ಬಂದಿಗೆ ಕಿರುಕುಳ ನೀಡದಂತೆ ಎಚ್ಚರಿಕೆ ನೀಡುವ ಮೂಲಕ ಸದ್ಯ ಸಮಸ್ಯೆ ತಿಳಿಗೊಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ರೈತ ಸಂಘದ ಜಿಲ್ಲಾ ಸಂಚಾಲಕರಾದ ಕಡಬೂರು ಮಂಜುನಾಥ್ ಅವರು ಕೊರೋನಾದಿಂದ ಇಡೀ ದೇಶವೇ ಲಾಕ್ ಡೌನ್ ಆಗಿ ಜನರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಾರ್ವಜನಿಕರನ್ನು ಮಾನಸಿಕವಾಗಿ ಕುಗ್ಗಿಸಿ ಹಣ ವಸೂಲಿಗೆ ಇಳಿದಿರುವ ಖಾಸಗಿ ಫೈನಾನ್ಸ್ ನವರು ಸಾಲವನ್ನು ಬಲವಂತವಾಗಿ ವಸೂಲಿ ಮಾಡಲು ಮುಂದಾಗಿದ್ದಾರೆ. ಜನರು ಕೊರೋನಾ ಬರುವ ಮೊದಲು ಸಾಲಪಡೆದಿದ್ದರು. ಇದೀಗ ಯಾವುದೇ ಹಣದ ಮೂಲ ಇಲ್ಲದಿರುವಾಗ ಫೈನಾನ್ಸ್ ನವರು ರೈತರು ಮತ್ತು ಮಹಿಳೆಯರಿಗೆ ಹಾಗೂ ಸಾಮಾನ್ಯ ಜನರ ಮನೆ ಮುಂದೆ ಹೋಗಿ ಮಾನಹಾನಿ ಮಾಡುವುದು, ಬಲವಂತವಾಗಿ ಸಾಲ ವಸೂಲಿ ಮಾಡುವುದು, ಕಿರುಕುಳ ನೀಡುವುದು ಸರಿಯಲ್ಲ ಇದು ಮುಂದುವರೆದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.