ಪೊನ್ನಂಪೇಟೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆ.ಪಿ.ಸಿ.ಸಿ.)ಯ ನೂತನ ವಕ್ತಾರರಾಗಿ ಹೈಕೋರ್ಟ್ ಹಿರಿಯ ವಕೀಲರು, ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ. ವಿಭಾಗದ ಅಧ್ಯಕ್ಷರಾಗಿರುವ ಕೊಡಗಿನ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ನೇಮಕಗೊಂಡಿದ್ದಾರೆ.
ಇದರಿಂದಾಗಿ ಜಿಲ್ಲೆಯ ಹೊಸ ಮುಖದ ನಾಯಕರೊಬ್ಬರಿಗೆ ಮತ್ತೊಂದು ಪ್ರತಿಷ್ಠಿತ ಹುದ್ದೆ ಒಲಿದಂತಾಗಿದೆ. ಈ ಕುರಿತು ಆದೇಶ ಹೊರಡಿಸಿದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತಿದೆ. ಮಾಧ್ಯಮವು ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಸ್ತಂಭವಾಗಿದ್ದು, ಇತ್ತೀಚೆಗಿನ ದಿನಗಳಲ್ಲಿ ದೃಶ್ಯ,ಮುದ್ರಣ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಸಾರ್ವಜನಿಕವಾಗಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆಯ ನೇತ್ರತ್ವ ವಹಿಸುತ್ತಿರುವದು ಮತ್ತು ಮಾಧ್ಯಮಗಳಲ್ಲಿ ಪಕ್ಷದ ವಿಚಾರ ಮತ್ತು ದೃಷ್ಠಿಕೋನ ಪರಿಣಾಮಕಾರಿಯಾಗಿ ಬಿಂಬಿತವಾಗಲು ಎ.ಎಸ್. ಪೊನ್ನಣ್ಣ ಅವರಿಗಿರುವ ಅನುಭವ, ತಿಳುವಳಿಕೆ ಹಾಗೂ ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮರ್ಥ್ಯವನ್ನು ಪರಿಗಣಿಸಿ ಕೆಪಿಸಿಸಿ ವಕ್ತಾರರಾಗಿ ನೇಮಕ ಮಾಡಿರುವುದಾಗಿ ಹಾಗೂ ತಕ್ಷಣವೇ ಕಾರ್ಯಪ್ರವತ್ತರಾಗಲು ಅಧಿಕಾರ ನೀಡಿರುವುದಾಗಿ ನೇಮಕಾತಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಪ್ರಥಮ ಶ್ರೇಣಿಯ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದ ಪೊನ್ನಣ್ಣ ಅವರು, ಹಿರಿಯ ನ್ಯಾಯವಾದಿಗಳಾಗಿದ್ದ ಮಾಜಿ ಶಾಸಕ ದಿವಂಗತ ಎ.ಕೆ. ಸುಬ್ಬಯ್ಯ ಅವರ ಪುತ್ರರಾಗಿದ್ದಾರೆ. ತಮ್ಮ ಕಿರಿಯ ವಯಸ್ಸಿನಲ್ಲಿಯೇ ರಾಜ್ಯ ಹೈಕೋರ್ಟಿನ ಹಿರಿಯ ವಕೀಲರಾಗಿ ಅರ್ಹತೆ ಪಡೆದುಕೊಂಡ ಇವರು, ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು.
ಇತ್ತೀಚಿನ ಕೆಲ ಸಮಯಗಳಿಂದ ಪಕ್ಷದ ಸಂಘಟನಾ ಚಟುವಟಿಕೆಗಳ ಮೂಲಕ ಮುನ್ನೆಲೆಗೆ ಬಂದ ಪೊನ್ನಣ್ಣ ಅವರು, ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ರಾಜ್ಯಾಧ್ಯಕ್ಷರಾಗುವ ಮೂಲಕ ಗಮನಸೆಳೆದಿದ್ದರು. ಇದೀಗ ಪಕ್ಷದ ವಕ್ತಾರರಾಗಿ ನೇಮಕವಾಗಿದ್ದು, ಪಕ್ಷದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದಂತಾಗಿದೆ.