News Kannada
Monday, October 03 2022

ಕರ್ನಾಟಕ

ಟಿಕೆಎಂ ಕಂಪೆನಿ ಕಾರ್ಮಿಕರಿಂದ ಅಹೋರಾತ್ರಿ ಪ್ರತಿಭಟನೆ - 1 min read

Photo Credit :

ಟಿಕೆಎಂ ಕಂಪೆನಿ ಕಾರ್ಮಿಕರಿಂದ ಅಹೋರಾತ್ರಿ ಪ್ರತಿಭಟನೆ

ರಾಮನಗರ: ಕಾರ್ಮಿಕ ಸಂಘದ ಪದಾಧಿಕಾರಿಯೊಬ್ಬರನ್ನು ಕ್ಷುಲ್ಲಕ ಕಾರಣಕ್ಕೆ ನೌಕರಿಯಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಹಾಗೂ ಅಧಿಕ ಕಾರ್ಯಭಾರದ ಒತ್ತಡವನ್ನು ತಡೆಯುವಂತೆ ಒತ್ತಾಯಿಸಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪೆನಿಯ ಕಾರ್ಮಿಕರು ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸಿದ್ದಾರೆ.

ಬಿಡದಿಯ ಟಿಕೆಎಂ ಕಂಪೆನಿಯ ಉದ್ಯೋಗಿ ಹಾಗೂ ಟಿಕೆಎಂ ಕಾರ್ಮಿಕ ಸಂಘದ ಪದಾಧಿಕಾರಿಯೊಬ್ಬರನ್ನು ವಿನಾಕಾರಣ ಕೆಲಸದಿಂದ ಅಮಾನತು ಮಾಡಲಾಗಿದೆ. ಅಲ್ಲದೆ ಕಂಪೆನಿಯ ಆಡಳಿತ ಮಂಡಳಿ ಕಾರ್ಮಿಕರನ್ನು ತೀರಾ ಅಮಾನವೀಯವಾಗಿ ನಡೆಸಿಕೊಳ್ಳುವ ಜೊತೆಗೆ ಕ್ಷಣಕಾಲವೂ ಪುರುಸೊತ್ತು ನೀಡದಂತೆ ಕೆಲಸ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ತಂದೊಡ್ಡಿದೆ. ಇದನ್ನು ಪ್ರಶ್ನಿಸಲು ಹೋದ ಕಾರ್ಮಿಕ ಸಂಘದ ಪದಾಧಿಕಾರಿಗಳೊಂದಿಗೆ ಕಂಪೆನಿಯ ಆಡಳಿತ ಮಂಡಳಿ ಅಧಿಕಾರಿಗಳು ಉಡಾಫೆಯಿಂದ ನಡೆದುಕೊಂಡಿದ್ದಾರೆಂದು ಆಕ್ರೋಶಗೊಂಡ ಕಾರ್ಮಿಕರು ಕೆಲಸದಿಂದ ದೂರ ಉಳಿದು ಮಿಂಚಿನ ಧರಣಿ ನಡೆಸಿದ್ದಾರೆ.

ಕೂಡಲೇ ನೌಕರನ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು. ಹಾಗೂ ಹೆಚ್ಚಿನ ಕಾರ್ಯದೊತ್ತಡವನ್ನು ನಿಯಂತ್ರಣಕ್ಕೆ ತರಬೇಕು, ಕಾರ್ಮಿಕರನ್ನು ಮಾನವೀಯತೆಯಿಂದ ಕಾಣಬೇಕು ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸುಮಾರು ಮೂರೂವರೆ ಸಾವಿರಕ್ಕೂ ಅಧಿಕ ಕಾರ್ಯನಿರತ ಉದ್ಯೋಗಿಗಳು ಕಂಪೆನಿಯ ಆವರಣದಲ್ಲಿ ಹಾಗೂ ಹೊರ ಭಾಗದಲ್ಲಿ ಅನಿರ್ಧಿಷ್ಟಾವಧಿಗೆ ಸಾಮೂಹಿಕ ಮುಷ್ಕರ ಆರಂಭಿಸಿದ್ದಾರೆ.

ಈ ಕುರಿತು ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಚಕ್ಕೆರೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೋವಿಡ್ ನಂತರದ ದಿನಗಳಲ್ಲಿ ಕಂಪೆನಿಯ ಆಡಳಿತ ಮಂಡಳಿ ಕೋವಿಡ್ ಮಾರ್ಗಸೂಚಿ ಹೆಸರಿನಲ್ಲಿ ಕಿರುಕುಳ ಆರಂಭವಾಗಿದ್ದು ಕಾರ್ಮಿಕರನ್ನು ತೀರಾ ಅಮಾನವೀೀಯವಾಗಿ ಕಾಣಲಾಗುತ್ತಿದೆ. ಉತ್ಪಾದನೆಗೆ ತೊಂದರೆಯಾಗದಂತೆ ಮಿಲಿ ಸೆಕೆಂಡ್ ನಲ್ಲಿ ಕಾರ್ಮಿಕರಿಂದ ಮಿತಿ ಮೀರಿ ಕೆಲಸ ತೆಗೆದುಕೊಳ್ಳುತ್ತಿದೆ. ಮಾಡಲಾಗದಿದ್ದರೆ ನೋಟಿಸ್ ಕೊಡುವುದು, ಪ್ರಶ್ನಿಸುವವರನ್ನು ಕೆಲಸದಿಂದ ಸಸ್ಪೆಂಡ್ ಮಾಡುವ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದೂರಿದರು.

 

ಕಾರ್ಮಿಕರ ಹಕ್ಕುಗಳನ್ನು ಗಾಳಿಗೆ ತೂರಿರುವ ಆಡಳಿತ ಮಂಡಳಿ ಸರಕಾರದ ಮಾರ್ಗಸೂಚಿಯನ್ನು ಸತತ ಉಲ್ಲಂಘಿಸುತ್ತಾ ಕಾರ್ಮಿಕರ ಜೀವದ ಜೊತೆ ಚಲ್ಲಾಟವಾಡುತ್ತಿದೆ. ಶೌಚಾಲಯಕ್ಕೆ ಹೋಗಲು ಸಹ ಅವಕಾಶ ನೀಡದೆ ಕೆಲಸ ತೆಗೆದುಕೊಳ್ಳಲಾಗುತ್ತಿದೆ. ಭಾರತ ಸರಕಾರದ ಕಾನೂನುಗಳನ್ನು ಉಲ್ಲಂಘಿಸುವ ಜೊತೆಗೆ ಭಾರತೀಯರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಆಡಳಿತ ಮಂಡಳಿ ಅಧಿಕಾರಿಗಳು ಮುಂದಾಗಿದ್ದಾರೆ  ಎಂದು ಆರೋಪಿಸಿದರು.

ಕಾರ್ಮಿಕರ ಮೇಲೆ ನಡೆಸುತ್ತಿರುವ ಶೋಷಣೆ ಕುರಿತು ಜಿಲ್ಲಾಧಿಕಾರಿಗಳು, ಸಚಿವರು ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ನೀಡಲಾಗಿದೆ. ಆದರೆ ಕಂಪೆನಿಯು ವಾಸ್ತವ ಸ್ಥಿತಿಯನ್ನು ಮರೆಮಾಚುತ್ತಿದ್ದು ಹೊರಗೊಂದು ಮತ್ತು ಒಳಗೊಂಡು ದ್ವಿನೀತಿಯನ್ನು ಅನುಸರಿಸುತ್ತಿದೆ. ಟಿಕೆಎಂ ಆಡಳಿತ ಮಂಡಳಿಯಿಂದ ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಆಗಬಹುದಾದ ಅಪಾಯವನ್ನು ತಡೆಯಲು ಸರಕಾರ ಮಧ್ಯೆ ಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದರು   

See also  ಕಡಬದಲ್ಲಿ ಗೂಡ್ಸ್ ಟೆಂಪೋ ಪಲ್ಟಿ: ಮಹಿಳೆ ಸೇರಿ ಇಬ್ಬರು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು