News Kannada
Tuesday, October 04 2022

ಕರ್ನಾಟಕ

ಕಾಡ್ಗಿಚ್ಚಿನಿಂದ ಬಂಡೀಪುರ ರಕ್ಷಣೆಗೆ ಬೆಂಕಿ ತಡೆ ರೇಖೆ - 1 min read

Photo Credit :

ಕಾಡ್ಗಿಚ್ಚಿನಿಂದ ಬಂಡೀಪುರ ರಕ್ಷಣೆಗೆ ಬೆಂಕಿ ತಡೆ ರೇಖೆ

ಚಾಮರಾಜನಗರ: ಕಳೆದ ಬೇಸಿಗೆಯಲ್ಲಿ ಕಾಡ್ಗಿಚ್ಚಿಗೆ ಸಿಲುಕದಂತೆ ಬಂಡೀಪುರ ಅರಣ್ಯವನ್ನು ಕಾಪಾಡಿಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮುಂಬರುವ ಬೇಸಿಗೆಯ ದಿನಗಳಲ್ಲಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಸಲುವಾಗಿ ಈಗಿನಿಂದಲೇ ಕಾರ್ಯತಂತ್ರಗಳನ್ನು ಆರಂಭಿಸಿದ್ದಾರೆ.

ಅರಣ್ಯದ ಸುತ್ತಲೂ ಬೆಂಕಿ ತಡೆ ರೇಖೆಗೆ ಆದ್ಯತೆ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ಬೀಳದಂತೆ ತಡೆಯಲು ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 2800 ಚದರ ಕಿ.ಮೀ. ಬೆಂಕಿ ತಡೆ ರೇಖೆ ನಿರ್ಮಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ಕಳೆದ ಬೇಸಿಗೆಯ ಅವಧಿಯಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಲಾಕ್ ಡೌನ್ ಮಾಡಿದ್ದರಿಂದ ಬಂಡೀಪುರ ಅರಣ್ಯಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತಲ್ಲದೆ, ಹೆದ್ದಾರಿಯನ್ನು ಕೂಡ ಬಂದ್ ಮಾಡಿದ್ದರಿಂದ ಜನ ಸಂಚಾರವಿಲ್ಲದ ಕಾರಣದಿಂದಾಗಿ, ಜತೆಗೆ ಅರಣ್ಯಾಧಿಕಾರಿಗಳು ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದರಿಂದ ಯಾವುದೇ ರೀತಿಯ ಅಗ್ನಿ ಅವಘಡ ಸಂಭವಿಸಲಿಲ್ಲ.

ಈ ಬಾರಿಯೂ ಕಳೆದ ಬಾರಿಯಂತೆ ಯಾವುದೇ ಅಗ್ನಿ ಅನಾಹುತಗಳು ಸಂಭವಿಸಬಾರದು ಎಂಬ ಕಾರಣಕ್ಕೆ ಅಧಿಕಾರಿಗಳು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು ಈ ಪೈಕಿ ಬೆಂಕಿ ತಡೆ ರೇಖೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು ಬಂಡೀಪುರ  ಅಭಯಾರಣ್ಯ ವ್ಯಾಪ್ತಿಯ 13ವಲಯಗಳಲ್ಲಿ 2828ಕೀಮಿ ಬೆಂಕಿ ರೇಖೆ ನಿರ್ಮಾಣ ಮಾಡುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದು, ಈ ಸಂಬಂಧ ಕೆಲಸಗಳನ್ನು ಆರಂಭಿಸಿದ್ದಾರೆ. ಕಳೆದ ವರ್ಷ ಉತ್ತಮವಾಗಿ ಮಳೆ ಬಂದಿತ್ತು ಪರಿಣಾಮ ಜನವರಿವರೆಗೂ ಮಣ್ಣು ಹಸಿಯಾಗಿಯೇ ಇತ್ತು. ಆದರೆ ಈ ಬಾರಿ ಈ ವ್ಯಾಪ್ತಿಯಲ್ಲಿ ಮಳೆ ಕಡಿಮೆ ಸುರಿದ ಕಾರಣದಿಂದ ಬಹುಬೇಗ ಕುರುಚಲು ಗಿಡಗಳು ಒಣಗುವ ಸಂಭವ ಜಾಸ್ತಿಯಿದೆ. ಹೀಗಾಗಿ ಅರಣ್ಯದ ಸುತ್ತಲೂ ನಾಡಿಗೆ ಹೊಂದಿಕೊಂಡಂತಿರುವ ಕುರುಚಲು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಗುತ್ತಿದ್ದು, ಇದರಿಂದ ಬೀಡಿ ಸಿಗರೇಟ್ ಇನ್ನಿತರ ಬೆಂಕಿ ಕಿಡಿಗಳು ಹಾರಿದರೂ ಅದರ ಪರಿಣಾಮ ಅರಣ್ಯದ ಮೇಲೆ ಬೀರದಂತೆ ತಡೆಯಲು ಸಾಧ್ಯವಾಗಲಿದೆ.

ಈ ಹಿಂದೆ ಬಂಡೀಪುರ ಅಭಯಾರಣ್ಯದಲ್ಲಿ ನಡೆದ ಕಾಡ್ಗಿಚ್ಚು ಪ್ರಕರಣವನ್ನು ಗಮನಿಸಿದರೆ ಬೆಂಕಿ ತಡೆ ರೇಖೆಯನ್ನು ನಿರ್ಮಾಣ ಮಾಡದ ಪ್ರದೇಶಗಳಲ್ಲಿಯೇ ಹೆಚ್ಚಿನ ಅವಘಡ ಸಂಭವಿಸಿರುವುದು ಕಂಡು ಬಂದಿದೆ. ಇದನ್ನೆಲ್ಲ ಮನಗಂಡ ಅರಣ್ಯಾಧಿಕಾರಿಗಳು ಈ ಬಾರಿ ಬೆಂಕಿತಡೆ ರೇಖೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಬಂಡೀಪುರ ಅಭಯಾರಣ್ಯದ ಮೇಲುಕಾಮನಹಳ್ಳಿ ಗೇಟ್ ನಿಂದ ಕೆಕ್ಕನಹಳ್ಳ ಗೇಟ್ ವರೆಗೆ ಹಾಗೂ ಮದ್ದೂರು ಚೆಕ್ ಪೋಸ್ಟ್ ನಿಂದ ಮೂಲೆಹೊಳೆ ಚೆಕ್ ಪೋಸ್ಟ್ ವರೆಗೂ ಹಾಗೂ ಇತರ ಸ್ಥಳಗಳಲ್ಲಿ ಬೆಂಕಿ ತಡೆ ರೇಖೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಜತೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಯ ಬದಿಯ  50 ಮೀಟರ್ ವ್ಯಾಪ್ತಿಯಲ್ಲಿ ಬೆಳೆದಿರುವ ಎಲ್ಲ ಕುರುಚಲು, ಕಳೆಗಿಡಗಳನ್ನು ತೆರವುಗೊಳಿಸಿ ಬೆಂಕಿ ತಡೆ ರೇಖೆ ನಿರ್ಮಾಣ ಮಾಡಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಈ ಬೆಂಕಿ ತಡೆ ರೇಖೆ ನಿರ್ಮಾಣ ಕಾರ್ಯಕ್ಕೆ ಸುಮಾರು 600 ಸಿಬ್ಬಂದಿ  ಸಜ್ಜುಗೊಂಡಿದ್ದು ಮುಂದಿನ ದಿನಗಳಲ್ಲಿ ದಿನಗೂಲಿ ಲೆಕ್ಕದಲ್ಲಿ 400 ಮಂದಿಯನ್ನು ಕಾರ್ಯಕ್ಕೆ ಬಳಸಿಕೊಳ್ಳಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡು ವರ್ಷಗಳ ಹಿಂದೆ ನಡೆದ ಹಲವು ಅಗ್ನಿ ಅನಾಹುತದ ಘಟನೆಗಳು ಇನ್ನು ನೆನಪಾಗಿ ಉಳಿದಿವೆ. ಮನುಷ್ಯನ ಸಜೀವ ದಹನದೊಂದಿಗೆ ಮರಗಿಡ, ಪ್ರಾಣಿಪಕ್ಷಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಶವಾಗಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇಂತಹ ದುರ್ಘಟನೆಗಳು ಮತ್ತೆ ನಡೆಯಬಾರದು ಎಂಬ ಉದ್ದೇಶದಿಂದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸಜ್ಜಾಗಿದ್ದು ಅರಣ್ಯವನ್ನು ಕಾಡ್ಗಿಚ್ಚಿನಿಂದ ರಕ್ಷಿಸಲು ಸರ್ವ ಪ್ರಯತ್ನಗಳನ್ನು ಈಗಿನಿಂದಲೇ ಆರಂಭಿಸಿರುರುವುದು ಕಂಡು ಬಂದಿದೆ.

See also  ಮುಂಬೈನಿಂದ ಮಂಡ್ಯಕ್ಕೆ ಬರುವವರಿಗೆ ಪ್ರವೇಶ ಬಂದ್

ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಪ್ಪಿಸಲು ಕಾಡಂಚಿನ ಗ್ರಾಮಗಳ ಜನರ ಸಹಕಾರ ಅಗತ್ಯವಾಗಿದೆ. ಇನ್ನು ಬೇಸಿಗೆಯಲ್ಲಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡುವುದು ಅಗತ್ಯವಾಗಿದೆ. ಎಲ್ಲರೂ ಈಗಿನಿಂದಲೇ ಕೇವಲ ಬಂಡೀಪುರ ಅರಣ್ಯ ಮಾತ್ರವಲ್ಲದೆ, ತಮ್ಮ ಸುತ್ತಮುತ್ತಲಿನ ಅರಣ್ಯದ ಬಗ್ಗೆ ಕಾಳಜಿ ವಹಿಸಿ ಬೇಸಿಗೆಯಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತವನ್ನು ತಪ್ಪಿಸುವ ಕೆಲಸದಲ್ಲಿ ಕೈ ಜೋಡಿಸಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು