ಗುಂಡ್ಲುಪೇಟೆ: ಕೆಎಸ್ ಆರ್ ಟಿಸಿ ಸಂಸ್ಥೆಗೆ ಸೇರಿದ ಐರಾವತ ಬಸ್ಗೆ ಕಬ್ಬಿಣದ ಪಟ್ಟಿ ತಗುಲಿ ಸಂಚರಿಸಲು ಸಾಧ್ಯವಾಗದೆ ರಸ್ತೆ ನಡುವೆ ನಿಂತ ಪರಿಣಾಮ ಎರಡು ಗಂಟೆಗಳ ಕಾಲ ವಾಹನಗಳು ಸಾಲುಗಟ್ಟಿ ನಿಂತ ಘಟನೆ ಬಂಡೀಪುರ ದಲ್ಲಿ ನಡೆದಿದೆ.
ತಾಲೂಕಿನ ಮೇಲುಕಾಮನಹಳ್ಳಿ ರಸ್ತೆಯಲ್ಲಿ ಬೆಳಗಿನ ಜಾವ 3 ಗಂಟೆ ವೇಳೆಯಲ್ಲಿ ಬೆಂಗಳೂರಿನಿಂದ ಊಟಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ (ಐರಾವತ)ನ ತಳಭಾಗಕ್ಕೆ ಕಬ್ಬಿಣದ ಪಟ್ಟಿ ತಗುಲಿ ಮುಂದೆ ಚಲಿಸಲು ಸಾಧ್ಯವಾಗದೆ ಸ್ಥಳದಲ್ಲೇ ನಿಂತಿತ್ತು. ಇದರಿಂದಾಗಿ ಗೋಪಾಲಸ್ವಾಮಿ ಬೆಟ್ಟ ವಲಯಾಧಿಕಾರಿ ಕಚೇರಿ ಮುಂಭಾಗವಿರುವ ಅರಣ್ಯ ಚೆಕ್ ಪೋಸ್ಟ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವಲ್ಲದೆ, ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಮೇಲುಕಾಮನಹಳ್ಳಿ ಎರಡ್ಮೂರು ತಾಸು ವಾಹನಗಳು ಹಿಂದಕ್ಕೂ ಹೋಗಲಾಗದೆ, ಮುಂದಕ್ಕೂ ಹೋಗಲಾಗದೆ ರಸ್ತೆಯಲ್ಲೇ ನಿಂತಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಪ್ರತಿದಿನವೂ ಮೇಲುಕಾಮನಹಳ್ಳಿ-ಕೆಕ್ಕನಹಳ್ಳ ಮಾರ್ಗದಲ್ಲಿ ವನ್ಯಜೀವಿಗಳ ಹಿತದೃಷ್ಟಿಯಿಂದ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡದೆ ರಸ್ತೆಗೆ ಗೇಟ್ ಮುಚ್ಚಿ ಬಂದ್ ಮಾಡಲಾಗುತ್ತದೆ. ಅಂತರರಾಜ್ಯ ಓಡಾಟ ನಡೆಸಲು ನಾಲ್ಕು ಕೆಎಸ್ ಆರ್ ಟಿಸಿ ಬಸ್ ಳಿಗೆ ಮಾತ್ರ ಸಂಚರಿಸಲು ವಿಶೇಷ ಅನುಮತಿಯಿದೆ. ಬೆಳಗಿನ ಜಾವ 3 ಗಂಟೆ ವೇಳೆಯಲ್ಲಿ ಊಟಿಗೆ ತೆರಳುತ್ತಿದ್ದ ಐರಾವತ ಬಸ್ ಗೇಟ್ ತೆರೆಯಲು ಮತ್ತು ಮುಚ್ಚಲು ಅಳವಡಿಸಿದ್ದ ಕಬ್ಬಿಣದ ಪಟ್ಟಿ ತಗುಲಿ ಮುಂದೆ ಸಾಗಲು ಸಾಧ್ಯವಾಗಿಲ್ಲ. ಹೀಗಾಗಿ ಬೆಳಗ್ಗೆ 6 ಗಂಟೆ ಬಳಿಕ ಬಂದ ಬೇರೆ ವಾಹನಗಳು ರಸ್ತೆಯಲ್ಲಿ ಸಾಗಲು ಸ್ಥಳಾವಕಾಶವಿಲ್ಲದೆ ಸುಮಾರು ಎರಡು ಕಿ.ಮೀ. ಸಂಚಾರ ದಟ್ಟಣೆ ಉಂಟಾಯಿತು. ಬಂಡೀಪುರ ಸಫಾರಿ ವಾಹನಗಳಿಗೆ ಕಾಡಿನೊಳಗೆ ಪರ್ಯಾಯ ಮಾರ್ಗ ಕಲ್ಪಿಸಿಕೊಡಲಾಯಿತು. ವಿಷಯ ತಿಳಿದು ಸ್ಥಳಕ್ಕೆ ಹೈವೆ ಪೆಟ್ರೋಲ್ ಪೊಲೀಸರು ಆಗಮಿಸಿ, ಚಾಮರಾಜನಗರ ದಿಂದ ಕ್ರೇನ್ ತರಿಸಿ ಐರಾವತ ಬಸ್ ಅನ್ನು ಮೇಲೆತ್ತಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂದರ್ಭ ಗುಂಡ್ಲುಪೇಟೆ ಹೈವೆ ಪೆಟ್ರೋಲ್ ವಾಹನ ಚಾಲಕ ಹೊರೆಯಾಲ ಮಹದೇವಸ್ವಾಮಿ ಕಬ್ಬಿಣದ ಪಟ್ಟಿಯನ್ನು ಸುತ್ತಿಗೆಯಿಂದ ಹೊಡೆದು ಸಂಚಾರಕ್ಕೆ ಅನುವು ಮಾಡಿಕೊಟ್ಟು ಸಾರ್ವಜನಿಕರ ಪ್ರಶಂಸೆಗೊಳಗಾದರು.