ನಂಜನಗೂಡು: ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲು ಯತ್ನಿಸಿದವರನ್ನು ಕಂದಾಯಾಧಿಕಾರಿಗಳು ತೆರವುಗೊಳಿಸಿರುವ ಘಟನೆ ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದ ವ್ಯಾಪ್ತಿಗೆ ಬರುವ ಚಿಕ್ಕಯ್ಯನಛತ್ರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಯ್ಯನಛತ್ರ ಗ್ರಾಮದ ಸಮೀಪ ಸರ್ವೆ ನಂಬರ್ 179ರಲ್ಲಿ ಸುಮಾರು 6 ಎಕರೆ ಸರ್ಕಾರಿ ಭೂಮಿ ಇದ್ದು, ಈ ಭೂಮಿಯಲ್ಲಿ ಯಾರೋ ರಾತ್ರೋ ರಾತ್ರಿ ಎಲ್ಲಿ ಬೆಳೆದಿದ್ದಂತಹ ಮರ ಗಿಡಗಳನ್ನು ತೆರವುಗೊಳಿಸಿ ಸಮತಟ್ಟುಗೊಳಿಸಲಾಗಿತ್ತು, ವಿಷಯ ತಿಳಿದ ಸುತ್ತ ಮುತ್ತಲ ಗ್ರಾಮಗಳಾದ ಚಿಕ್ಕಯ್ಯನ ಛತ್ರ, ತಾಂಡವಪುರ, ಬಂಚಹಳ್ಳಿ ಹುಂಡಿ, ಕನಕನಗರ, ಕೆಂಪಿಸಿದ್ದನಹುಂಡಿ, ಸೇರಿದಂತೆ ಮುಂತಾದ ಗ್ರಾಮಗಳ ಜನತೆ ತಮಗೆ 30X40 ಅಳತೆ ಜಾಗ ದೊರೆಯುತ್ತದೆ ಎಂದು ದಾರ, ಟೇಪು ಕಟ್ಟಿಕೊಂಡು ಜಾಗ ಗುರ್ತಿಸಿಕೊಳ್ಳುತ್ತಿದ್ದರು.
ವಿಷಯ ತಿಳಿದ ತಾಲೂಕು ದಂಡಾಧಿಕಾರಿಗಳಾದ ಕೆ.ಎಂ.ಮಹೇಶ್ ಕುಮಾರ್ ಅವರು ಸ್ಥಳೀಯ ಆರ್.ಐ ರಾಜುರವರಿಗೆ ದೂರವಾಣಿ ಮೂಲಕ ಈ ವಿಷಯವನ್ನು ತಿಳಿಸಿ ಸ್ಥಳಕ್ಕೆ ಹೋಗಿ ಮಹಜರು ಮಾಡಿ ಅಲ್ಲಿ ಅಕ್ರಮವಾಗಿ ಪ್ರವೇಶ ಮಾಡಿರುವವರನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು, ಅವರ ಸೂಚನೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಆರ್.ಐ ರಾಜುರವರು ಸಿನಿಮೀಯ ರೀತಿಯಲ್ಲಿ ನಡೆದಿದ್ದಂತಹ ಈ ಅತಿಕ್ರಮ ಪ್ರವೇಶ ಮಾಡಿದ್ದ ಜನರನ್ನು ತೆರವುಗೊಳಿಸಿ ಇದು ಸರ್ಕಾರಿ ಭೂಮಿ, ಇಲ್ಲಿ ಯಾವುದೇ ನಿವೇಶನ ಮಾಡಲು ಅವಕಾಶವಿಲ್ಲ, ಅಕ್ರಮವಾಗಿ ಪ್ರವೇಶ ಮಾಡಿದರೆ ಅಂತಹವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜನರಿಗೆ ಎಚ್ಚರಿಕೆ ನೀಡಿದರು, ಇದೇ ವೇಳೆ ಸಾರ್ವಜನಿಕರು ಮಾತನಾಡಿ ಈ ಭಾಗದಲ್ಲಿ ಭೂಮಿಗೆ ಹೆಚ್ಚು ಬೆಲೆ ನಿಗದಿಯಾಗಿರುವುದರಿಂದ ಸರ್ಕಾರಿ ಭೂಮಿಯನ್ನು ಕಬಳಿಸುವ ಭೂ ಗಳ್ಳರ ದಂಧೆ ಹೆಚ್ಚಾಗಿದೆ, ಅಂತಹವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಐ ರಾಜುರವರು ಈ ಭೂಮಿ ಸರ್ಕಾರದ ಆಸ್ತಿ, ಯಾರೋ ವ್ಯಕ್ತಿಗಳು ಈ ಭೂಮಿಯಲ್ಲಿ ಬೆಳೆದಿದ್ದಂತಹ ಮರಗಿಡಗಳನ್ನು ತೆರವುಗೊಳಿಸಿ ಸಮತಟ್ಟು ಮಾಡಿರುವುದನ್ನು ಗಮನಿಸಿದ ಸ್ಥಳೀಯರು ಇಲ್ಲಿ ನಮಗೆ ಸರ್ಕಾರದಿಂದ ನಿವೇಶನ ದೊರಕಬಹುದು ಎಂದು ಭಾವಿಸಿ ಈ ರೀತಿ ಅತಿಕ್ರಮ ಪ್ರವೇಶ ಮಾಡಿದ್ದಾರೆ, ಆದರೆ ಇಲ್ಲಿ ಆ ರೀತಿಯ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆದಿಲ್ಲ, ಇದು ಸರ್ಕಾರದ ಆಸ್ತಿಯಾಗಿರುವುದರಿಂದ ಈ ಆಸ್ತಿಯನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಈ ಜಾಗವನ್ನು ಗುರ್ತಿಸಿ, ಸರ್ಕಾರದ ನಾಮಫಲಕವನ್ನು ಅಳವಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾದಿಕಾರಿ ಸಂತೋಷ್, ಗ್ರಾ.ಪಂ ಮಾಜಿ ಸದಸ್ಯರಾದ ರಮೇಶ್, ಪ್ರಭು, ಸೇರಿದಂತೆ ಮುಂತಾದವರು ಹಾಜರಿದ್ದರು.