ಕಾಸರಗೋಡು: ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಹಾಗೂ ಶರತ್ ಲಾಲ್ ಕೊಲೆ ಪ್ರಕರಣ ಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ವಿರುದ್ಧ ಕೇರಳ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಇದರಿಂದ ರಾಜ್ಯ ಸರಕಾರಕ್ಕೆ ಮುಖಭಂಗವಾಗಿದೆ. ತನಿಖೆಯ ಕಡತಗಳನ್ನು ಕೂಡಲೇ ಸಿಬಿಐಗೆ ಒಪ್ಪಿಸುವಂತೆ ಕ್ರೈಂ ಬ್ರಾಂಚ್ ಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಕೊಲೆಗೀಡಾದ ಕಾರ್ಯಕರ್ತರಿಬ್ಬರ ಕುಟುಂಬಸ್ಥರು ಸಿಬಿಐ ತನಿಖೆ ನಡೆಸುವಂತೆ ಹೈಕೋರ್ಟ್ ಮೆಟ್ಟಲೇರಿದ್ದರು. ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಇದರ ವಿರುದ್ಧ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಸಿಪಿಎಂ ಸ್ಥಳೀಯ ಮುಖಂಡ ಸೇರಿದಂತೆ 12 ಮಂದಿ ಆರೋಪಿಗಳನ್ನು ಬಂಧಿಸಿತ್ತು. ಆರಂಭದಲ್ಲಿ ಕಾಸರಗೋಡು ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿತ್ತು. ಆದರೆ ರಾಜಕೀಯ ಒತ್ತಡದಿಂದ ಆರೋಪಿಗಳನ್ನು ಸಂರಕ್ಷಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಕುಟುಂಬಸ್ಥರು ಕಾನೂನು ಹೋರಾಟ ನಡೆಸಿದ್ದರು.
2019ರ ಫೆಬ್ರವರಿ 17 ರಂದು ರಾತ್ರಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಪೆರಿಯ ಕಲ್ಯೊಟ್ ನಲ್ಲಿ ಕೊಚ್ಚಿ ಕೊಲೆಗೈಯ್ಯಲಾಗಿತ್ತು.