ಒಂದು ಕಾಲದಲ್ಲಿ ಬಂಜರು ಭೂಮಿಯ ಸಸ್ಯವಾಗಿ ಮನುಷ್ಯನಿಂದ ಬಹು ದೂರವಾಗಿಯೇ ಉಳಿದಿದ್ದ ಪಾಪಾಸುಕಳ್ಳಿ ಇತ್ತೀಚೆಗೆ ಉದ್ಯಾನವನ ಮತ್ತು ಮನೆಯ ಹೂಕುಂಡಗಳಲ್ಲಿ ಆಶ್ರಯ ಪಡೆಯುತ್ತಾ ತನ್ನದೇ ಆದ ಸೌಂದರ್ಯದಿಂದ ನೋಡುಗರನ್ನು ಆಕರ್ಷಿಸುತ್ತಾ ಜನಮನ್ನಣೆಗೆ ಪಾತ್ರವಾಗುತ್ತಿದೆ.
‘ಕ್ಯಾಕ್ಟೇಸಿ’ ಕುಟುಂಬಕ್ಕೆ ಸೇರಿದ ಪಾಪಾಸುಕಳ್ಳಿಯ ಶಾಸ್ತ್ರೀಯ ಹೆಸರು ‘ಬಿಪನ್ಯಿ’ಯ ಆಗಿದ್ದು, ಇವುಗಳಲ್ಲಿ ಸುಮಾರು ಇನ್ನೂರ ಐವತ್ತರಿಂದ ಮುನ್ನೂರವರೆಗೂ ಪ್ರಭೇದಗಳಿವೆ ಎಂದು ಹೇಳಲಾಗಿದೆ. ಮೂರು ಬಗೆಯ ಅಂದರೆ ‘ಡಿಲೆನಿಯೈ’ ಮಾನಕ್ಯಾಂತ, ಇಲೆಟಿಯರ್’ ಇವುಗಳು ಮಾತ್ರ ಭಾರತದಲ್ಲಿ ಕಂಡು ಬರುತ್ತಿವೆ.
ಹಿಮಾಲಯದ ಎರಡು ಸಾವಿರ ಮೀಟರ್ ಎತ್ತರದ ಪ್ರದೇಶಗಳಲ್ಲೂ ಪಾಪಾಸುಕಳ್ಳಿಗಳು ಕಂಡು ಬರುತ್ತಿವೆಯಾದರೂ, ಇದು ಭಾರತ ದೇಶದ ಸಸ್ಯವಲ್ಲ ಎನ್ನಲಾಗಿದೆ. ಪಾಪಾಸುಕಳ್ಳಿಯ ತವರು ಅಮೆರಿಕ ಎಂದು ಹೇಳಲಾಗಿದೆ. ಅಲ್ಲಿಂದ ಪೋರ್ಚುಗೀಸರು ಭಾರತಕ್ಕೆ ತಂದಿದ್ದು, ಇಲ್ಲಿನ ಹವೆ ಮತ್ತು ಮಣ್ಣು ಇದಕ್ಕೆ ಸೂಕ್ತವಾದುದರಿಂದ ಇಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಯಿತು.
ಪಾಪಾಸುಕಳ್ಳಿಯ ಮೂಲಕಾಂಡಗಳು ಸ್ಥಂಭಾಕೃತಿಯಲ್ಲಿದ್ದು, ಇದರಿಂದ ಚಪ್ಪಟೆಯಾಕಾರದ ಅಂಡಾಕಾರದ ಕವಲುಗಳು ಹೊರಟಿರುತ್ತವೆ. ಇವುಗಳನ್ನು ದೂರದಿಂದ ವೀಕ್ಷಿಸಿದ್ದೇ ಆದರೆ ಒಂದರ ಮೇಲೊಂದರಂತೆ ಜೋಡಿಸಿಟ್ಟಿದ್ದಾರೇನೋ? ಎಂಬಂತೆ ಕಂಡು ಬರುತ್ತದೆ. ಈ ಕವಲುಗಳ ಮೇಲೆ ಅನೇಕ ಗಂಟುಗಳಿದ್ದು, ಪ್ರತಿಯೊಂದು ಗಂಟುಗಳ ಮೇಲೂ ಮುಳ್ಳುಗಳ ಗೊಂಚಲಿವೆ. ಈ ಮುಳ್ಳುಗಳ ಮಧ್ಯೆ ಕೊಂಕು ತುದಿಯುಳ್ಳ ಬಿರುಗೂದಲುಗಳಿದ್ದು, ಕಾಂಡದ ಎಳೆಯ ಕವಲುಗಳಲ್ಲಿ ಎಲೆಗಳು ಪೊರೆಯಂತಿರುತ್ತವೆ. ಆದರೆ, ಬೆಳೆದ ಕವಲುಗಳಲ್ಲಿ ಈ ಎಲೆಗಳು ಕಂಡು ಬರುವುದಿಲ್ಲ. ಇವುಗಳ ಕಂಕುಳಲ್ಲಿ ಗುಬಟುಗಳಂತಿರುವ ಕಂಕುಳ ಮೊಗ್ಗುಗಳ ಎಲೆಗಳು ಮುಂದೆ ಮುಳ್ಳುಗಳಾಗಿ ಬೆಳೆಯುವುದು ಕಂಡು ಬರುತ್ತದೆ.
ಪಾಪಾಸುಕಳ್ಳಿಯ ಕಾಂಡವು ಇತರೆ ಕಳ್ಳಿಗಳ ಕಾಂಡದಂತೆ ಎಲೆಯ ರೂಪದ ಕಾಂಡವಾಗಿ ಅಂದರೆ ಚಪ್ಪಟೆಯಾಕಾರವಾಗಿಯೂ ಅಥವಾ ಸ್ಥಂಭಾಕಾರವಾಗಿಯೂ, ದಪ್ಪವಾಗಿಯೂ ಇದ್ದು, ಹಸಿರು ಬಣ್ಣವನ್ನು ಹೊಂದಿದೆ. ಈ ರೀತಿಯ ಮಾರ್ಪಾಡನ್ನು ಹೊಂದಿರುವುದರಿಂದ ಇದು ನೀರಿಲ್ಲದಂಥ ಪ್ರದೇಶಗಳಲ್ಲೂ ಬದುಕುವ ಸಾರ್ಮಥ್ಯವನ್ನು ಹೊಂದಿದೆ. ಇತರೆ ಸಸ್ಯಗಳಾಲ್ಲಾಗುವ ನೀರಿನ ನಷ್ಟ ಈ ಪಾಪಾಸುಕಳ್ಳಿಯಲ್ಲಿ ಆಗುವುದಿಲ್ಲ. ಏಕೆಂದರೆ ಇದರ ಎಲೆಗಳು ಮುಳ್ಳುಗಳಾಗಿ ಮಾರ್ಪಾಡು ಹೊಂದಿದ್ದು, ಬಾಷ್ಪ ವಿಸರ್ಜನೆಯಾಗುವುದಿಲ್ಲವಾಗಿದೆ. ಇದರ ಕಾಂಡದಲ್ಲಿ ಕ್ಲೋರೋಫಿಲ್ ಇದ್ದು, ಇದೇ ದ್ಯುತಿಸಂಶ್ಲೇಷಣೆಯನ್ನು ನಡೆಸುತ್ತದೆಯಲ್ಲದೆ, ಇದರ ಕಾಂಡದಲ್ಲಿ ಲೋಳೆಯನ್ನೊಳಗೊಂಡ ಅಂಗಾಂಶವಿದ್ದು, ಇದು ನೀರನ್ನು ಬಹಳ ಸಮಯಗಳ ತನಕವೂ ಸಂಗ್ರಹಿಡುವಲ್ಲಿ ಸಹಕಾರಿಯಾಗಿದೆ. ಪಾಪಾಸುಕಳ್ಳಿಯ ವಂಶಾಭಿವೃದ್ಧಿಯನ್ನು ಗೆಲ್ಲುಗಳಿಂದ ಹಾಗೂ ಬೀಜಗಳಿಂದ ಮಾಡಲಾಗುತ್ತಿದೆ.
ಪಾಪಾಸುಕಳ್ಳಿಯಿಂದ ಹಲವಾರು ಉಪಯೋಗಗಳಿದ್ದು, ಕೆಲವೆಡೆಗಳಲ್ಲಿ ಮುಳ್ಳಿನ ಸಸ್ಯವಾದುದರಿಂದ ಮನೆ ಹಾಗೂ ಹೊಲಗಳ ಸುತ್ತಲೂ ಶತ್ರುಗಳಿಂದ ರಕ್ಷಿಸಲು ಬೇಲಿಗಳಂತೆ ನೆಡುತ್ತಾರೆ. ಅಲ್ಲದೆ ಇದರಿಂದ ಪಡೆದ ಒರಟು ನಾರನ್ನು ಕಾಗದದ ತಯಾರಿಕೆಯಲ್ಲೂ ಉಪಯೋಗಿಸಬಹುದಾಗಿದೆ. ಮಳ್ಳುಗಳನ್ನು ಬೇರ್ಪಡಿಸಿ, ದನಕರುಗಳಿಗೆ ಮೇವಾಗಿಯೂ ಉಪಯೋಗಿಸಬಹುದು. ರಾಜಸ್ಥಾನದಲ್ಲಿ ಮುಳ್ಳುಗಳಿಲ್ಲದ ಪಾಪಾಸುಕಳ್ಳಿಯನ್ನು ಬೆಳೆಸಿ ದನಕರುಗಳಿಗೆ ಮೇವಾಗಿ ಉಪಯೋಗಿಸಲಾಗುತ್ತಿದೆ.
ಪಾಪಾಸುಕಳ್ಳಿಯಲ್ಲಿ ಹಲವು ರೀತಿಯ ಔಷಧೀಯ ಗುಣಗಳಿದ್ದು, ಇದರ ಕಾಂಡವನ್ನು ಗೆನರೀಯ ರೋಗಕ್ಕೆ ಔಷಧಿÀಯಾಗಿ ಉಪಯೋಗಿಸುತ್ತಾರೆ. ಹಣ್ಣಿನ ರಸವನ್ನು ಪಿತ್ತರಸ ಸ್ರಾವಕ ಹಾಗೂ ಕೆಮ್ಮು, ಕಫ, ಮೊದಲಾದವುಗಳಿಗೆ ಔಷಧಿಯಾಗಿ ಉಪಯೋಗಿಸಬಹುದಾಗಿದೆ. ಹಣ್ಣು ತಿನ್ನಲು ರುಚಿಯಾಗಿದ್ದು, ಇದರಲ್ಲಿ ತಂಪುಕಾರಕ ಹಾಗೂ ಚೈತನ್ಯದಾಯಕ ಗುಣಗಳಿವೆ ಎಂದು ತಿಳಿದು ಬಂದಿದೆ.