ಕೆ.ಆರ್.ಪೇಟೆ: ಬಿಜೆಪಿಯ ಅಭಿವೃದ್ಧಿ ಕೆಲಸಗಳ ಮೂಲಕ ವಿರೋಧಿಗಳ ಟೀಕೆಗೆ ಉತ್ತರ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ನಡೆದ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲ್ಲೂಕುಗಳ ಗ್ರಾಮ ಸ್ವರಾಜ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಈ ಹಿಂದಿನ ಹಲವು ಚುನಾವಣೆಗಳಲ್ಲಿ ಶಿರಾ ತಾಲೂಕಿನ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ಹೇಳುತ್ತಾ ಮತ ಪಡೆಯುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಚುನಾವಣೆಯ ನಂತರ ಮೈಮರೆಯುತ್ತಿದ್ದವು ಆದರೆ ಬಿಜೆಪಿ ಪಕ್ಷವು ಉಪಚುನಾವಣೆಗೆ ಮುನ್ನ ಚುನಾವಣೆಗೆ ಕೆರೆಗಳಿಗೆ ನೀರು ಹರಿಸುವ ಭರವಸೆ ನೀಡಲಾಗಿತ್ತು. ಗೆದ್ದ ಒಂದೇ ವಾರಕ್ಕೆ ಕೆರೆಗಳಿಗೆ ನೀರು ಹರಿಸಲಾಯಿತು. ಅದೇ ರೀತಿ ಕೆ.ಆರ್.ಪೇಟೆ ಕ್ಷೇತ್ರಕ್ಕೆ ನಾರಾಯಣಗೌಡರು ಸೇರ್ಪಡೆ ಸಮಯದಲ್ಲಿ ನೀಡಿದ ಆಶ್ವಾಸನೆಯಂತೆ ಸುಮಾರು 1000 ಕೋಟಿ ರೂ.ಗಳ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಹೇಳಿದರು.
ವಿಧಾನಸಭೆ-ಲೋಕಸಭಾ ಚುನಾವಣೆಯಲ್ಲಿ ಮುಖಂಡರ ಗೆಲುವಿಗಾಗಿ ಸಮಾವೇಶ ಮಾಡುತ್ತೇವೆ ಆದರೆ ಕಾರ್ಯಕರ್ತರನ್ನು ಗ್ರಾಮ ಪಂಚಾಯಿತಿಯಲ್ಲಿ ಗೆಲ್ಲಿಸಿ ನಾಯಕನ್ನಾಗಿ ರೂಪಿಸಿ ಅವರಿಗೆ ಶಕ್ತಿ ತುಂಬಲು ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಗ್ರಾಮ ಸ್ವರಾಜ್ ಅಭಿಮಾನ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಪಕ್ಷದ ವತಿಯಿಂದ ರಾಜ್ಯಾಧ್ಯಂತ ರೂಪಿಸಲಾಗುತ್ತಿದೆ ಎಂದರು.
ಕಂದಾಯ ಸಚಿವ ಆರ್.ಅಶೋಕ್ ಅವರು ಮಾತನಾಡಿ ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿರುವುದನ್ನು ಕಂಡು ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ನಡುಕ ಆರಂಭವಾಗಿದೆ. ಕಾಂಗ್ರೇಸ್ ಪಕ್ಷವು ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಳ್ಳದೇ ಗಾಢವಾದ ನಿದ್ರೆಯಲ್ಲಿದ್ದರೆ, ಜೆಡಿಎಸ್ ಪಕ್ಷವು ಚುನಾವಣಾ ಕಣದಿಂದಲೇ ಮಾಯವಾದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಒಬ್ಬ ನಾವಿಕನಿಲ್ಲದೆ ನೈತಿಕವಾಗಿ ಅಧಃಪಥನದತ್ತ ಸಾಗುತ್ತಿರುವುದನ್ನು ಕಂಡು ಸಿದ್ಧರಾಮಯ್ಯ ಅವರಿಗೆ ಭ್ರಮನಿರಸನವಾಗಿದೆ. ವಿಶ್ವಮಾನ್ಯ ನಾಯಕರಾದ ಪ್ರಧಾನಿ ನರೇಂದ್ರಮೋಧಿ ಅವರನ್ನು ಎದುರಿಸ ಶಕ್ತಿಯನ್ನು ಹೊಂದಿರುವ ನಾಯಕರಿಲ್ಲದೆ ಕಾಂಗ್ರೆಸ್ ಪಕ್ಷವು ಕಂಗೆಟ್ಟಿದೆ ಎಂದು ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡಿ ಕಾಂಗ್ರೆಸ್ ಪಕ್ಷವು ಜನರಿಂದ ತಿರಸ್ಕøತವಾಗುತ್ತಿರುವ ಪಕ್ಷವಾಗಿದೆ. ರಾಜ್ಯದ ಕಂದಾಯ ಸಚಿವ ಅಶೋಕ್ ಮತ್ತು ಯುವಸಾರಥಿ ಬಿ.ವೈ.ವಿಜಯೇಂದ್ರ ಅವರ ಸಾರಥ್ಯದಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ಉಪಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದೇವೆ. ಮುಂದೆ ನಡೆಯಲಿರುವ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಗಳು ಹಾಗೂ ಧಾರವಾಡ ಗ್ರಾಮೀಣ ಲೋಕಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ ಎಂದು ಹೇಳಿದರು.