ಕಾರವಾರ:ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಸರಕಾರ ತೀರ್ಮಾನಿಸಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.
ಕಾರವಾರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಗೋ ಹತ್ಯೆ ನಿಷೇಧಕ್ಕೆ ಪ್ರಮುಖ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲು ಸುಪ್ರಿಂ ಕೋರ್ಟ್ನ ಆದೇಶಿವಿದೆ. ಇದರಲ್ಲಿ ಎನ್ಜಿಒಗಳ ಸದಸ್ಯರೂ ಇರುತ್ತಾರೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಮಿತಿಯೂ ಇದೆ.
ದನಕರುಗಳ ಕಳ್ಳ ಸಾಗಾಣಿಕೆ ದೊಡ್ಡ ಪ್ರಮಾಣದಲ್ಲಿ ನಡೆದಿದ್ದು ಅದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತೇವೆ. ಗೋ ಹತ್ಯೆ ಕಾನೂನು ಜಾರಿಗೊಳಿಸುವ ನಿಟ್ಟಿನಲ್ಲಿ ಈ ಸಮೀತಿಗಳನ್ನು ಪುನರ್ ರಚನೆ ಮಾಡಲಾಗುವುದು ಎಂದರು.
ಮೊದಲು ವರದಕ್ಷಿಣೆ ಒಂದು ಸಾಮಾನ್ಯ ಪ್ರಕ್ರಿಯೆಯಾಗಿತ್ತು. ಆದರೆ ಬರಬರುತ್ತ ವರದಕ್ಷಿಣೆ ಒಂದು ಸಾಮಾಜಿಕ ಪಿಡುಗಾಗಿ ಪರಿವರ್ತನೆಯಾದ ಬಳಿಕ ಕೇಂದ್ರ ಸರಕಾರ ವರದಕ್ಷಿಣೆ ನಿಷೇಧ ಕಾನೂನು ಜಾರಿಗೆ ತಂದಿತು. ಅದೇ ರೀತಿ ವ್ಯಕ್ತಿ ಸ್ವಾತಂತ್ರದ ಹಂತದಲ್ಲಿದ್ದ ಮತಾಂತರ ಬರುಬರುತ್ತ ಸಮಸ್ಯೆಯಾಗಿ ಪರಿವರ್ತನೆಯಾಗುತ್ತಿದೆ. ಅನೇಕರು ಅರಿವೇ ಇಲ್ಲದೇ ಮತಾಂತರಗೊಳ್ಳುತ್ತಿದ್ದಾರೆ. ಅದೇ ರೀತಿ ಲವ್ ಜಿಹಾದ್ ಬಗ್ಗೆಯೂ ಅನೇಕ ಪಾಲಕರಿಂದ ದೂರುಗಳು ಬಂದಿವೆ. ಲವ್ ಜಿಹಾದ್ ಮತ್ತು ಮತಾಂತರ ವಿರುದ್ಧ ಕಾನೂನು ಜಾರಿಗೆ ತರುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಈ ಕುರಿತು ಕಾನೂನು ಜಾರಿಗೆ ತರಲು ನಡೆದಿರುವ ಪ್ರಯತ್ನವನ್ನು ಅಧ್ಯಯನ ಮಾಡಿ ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.