ಮದ್ದೂರು: ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ವಲಯದ ಗಿಲ್ ವುಡ್ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 14ಕ್ಕೂ ಹೆಚ್ಚು ಮಂದಿ ಮಹಿಳಾ ಕಾರ್ಮಿಕರಿಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ.
ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ತಾಲೂಕು ಆಸ್ಪತ್ರೆ ವತಿಯಿಂದ ಕೋವಿಡ್-19 ಪರೀಕ್ಷಗೆ ಒಳಪಡಿಸಿದ 70 ಮಂದಿ ಕಾರ್ಮಿಕರ ಪೈಕಿ 14 ಮಂದಿಗೆ ಕೊರೋನಾ ಪಾಸಿಟೀವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸಲು ನಿರಾಕರಿಸಿದರು.
550ಕ್ಕೂ ಹೆಚ್ಚು ಮಂದಿ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲ ಮಂದಿಗೆ ಕೊರೋನಾ ಪಾಸಿಟೀವ್ ಬಂದಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಕಾರ್ಖಾನೆಗೆ ತೆರಳಲು ನಿರಾಕರಿಸಿದರಲ್ಲದೇ ಪಾಸಿಟೀವ್ ಪ್ರಕರಣಗಳು ವರದಿಯಾಗಿರುವ ನೌಕರರಿಗೆ ವೇತನ ಸಹಿತ ರಜೆ ಘೋಷಿಸುವಂತೆ ಒತ್ತಾಯಿಸಿದರು.
ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸುವ ನಿರ್ವಹಿಸುವ ನೌಕರರು ಎರಡು ದಿನಗಳಲ್ಲಿ ಕೊರೋನಾ ಪರೀಕ್ಷೆ ನಡೆಸುವಂತೆ ಸೂಚಿಸಿದರಲ್ಲದೇ ಯಾವುದೇ ರೋಗ ಲಕ್ಷಣಗಳು ಕಂಡು ಬರದ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು.
ಸದರಿ ವಿಚಾರವಾಗಿ ಮದ್ದೂರು ತಹಶೀಲ್ದಾರ್ ವಿಜಯಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕೆಲ ಕಾರ್ಮಿಕರು ಗಿಲ್ ವುಡ್ ಕಂಪನಿಯ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿಯನ್ನು ವಿವರಿಸಿದರಲ್ಲದೇ ವೇತನ ಸಹಿತ ರಜೆ ಘೋಷಿಸುವಂತೆ ಆದೇಶಿಸಲು ಮನವಿ ಮಾಡಿದರು.
ಕಾರ್ಮಿಕರ ಬೇಡಿಕೆಯನ್ವಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ವಿಜಯಕುಮಾರ್ ಸೋಮವಾರದಿಂದಲೇ ಕಾರ್ಖಾನೆಗೆ ರಜೆ ಘೋಷಿಸುವಂತೆ ಸೋಂಕಿತ ನೌಕರರನ್ನು ಸೂಕ್ತ ಚಿಕಿತ್ಸೆಗೆ ರವಾನಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಯಾಯಿತು.