ಕೃಷ್ಣರಾಜಪೇಟೆ: ತಾಲೂಕಿನ ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ರಾಜಕೀಯ ದ್ವೇಷಕ್ಕೆ ಸುಮಾರು 1500 ಕೋಳಿಗಳು ಬಲಿಯಾಗಿರುವ ಘಟನೆಯು ನಡೆದಿದೆ.
ಸೊಳ್ಳೇಪುರ ಗ್ರಾಮದ ತಮ್ಮ ತೋಟದಲ್ಲಿ ಕೋಳಿ ಫಾರಂ ನಡೆಸುತ್ತಿರುವ ಕಿಕ್ಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆಗಿರುವ ಜಯರಾಮು 1500 ಸುಗುಣ ಕೋಳಿ ತಳಿಯ ಮರಿಗಳನ್ನು ಸಾಕುತ್ತಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಸಾಕುತ್ತಿದ್ದ ಕೋಳಿ ಮರಿಗಳು ಆರೋಗ್ಯವಾಗಿದ್ದು ಚೆನ್ನಾಗಿ ಬೆಳವಣಿಗೆಯನ್ನು ಕಂಡಿದ್ದವು. ಆದರೆ ರಾತ್ರಿ ಕೋಳಿಗಳಿಗೆ ಸರಬರಾಜು ಮಾಡುವ ನೀರಿನ ತೊಟ್ಟಿಗೆ ಕಿಡಿಗೇಡಿಗಳು ವಿಷವನ್ನು ಮಿಶ್ರಣ ಮಾಡಿರುವುದರಿಂದ ನೀರು ಕುಡಿದು ಎಲ್ಲ ಕೋಳಿ ಮರಿಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ.
ಘಟನೆಯ ಸಂಬಂಧವಾಗಿ ಕಿಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ಸಬ್ಇನ್ಸ್ ಪೆಕ್ಟರ್ ನವೀನ್ ಸೊಳ್ಳೇಪುರ ಗ್ರಾಮದ ಜಯರಾಮು ಅವರ ಕೋಳಿ ಫಾರಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಪಶುವೈದ್ಯಾಧಿಕಾರಿಗಳು ನೀರಿನಲ್ಲಿ ವಿಷಮಿಶ್ರಣ ಮಾಡಿರುವುದರಿಂದ ಕೋಳಿ ಮರಿಗಳು ಸತ್ತಿರುವುದನ್ನು ಖಚಿತಪಡಿಸಿದ್ದಾರೆ.
ಸೊಳ್ಳೇಪುರ ಜಯರಾಮು ಅವರಿಗೆ ಸೇರಿದ ಕೋಳಿ ಫಾರಂನ 1500 ಕೋಳಿ ಮರಿಗಳಿಗೆ ವಿಷ ಉಣಸಿದವರು ಯಾರು ಎಂಬ ಬಗ್ಗೆ ಕಿಕ್ಕೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸರ್ಕಲ್ ಇನ್ಸ್ ಪೆಕ್ಟರ್ ದೀಪಕ್ ಮತ್ತು ನಾಗಮಂಗಲ ಡಿವೈಎಸ್ಪಿ ನವೀನ್ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.