ಕೆ.ಆರ್.ಪೇಟೆ: ಭಾರತೀಯ ಪುರಾತತ್ವ ಇಲಾಖೆ ಸೇರಿದ ಹಾಗೂ ರಾಷ್ಟ್ರೀಯ ಸ್ಮಾರಕವಾಗಿ ಸಂರಕ್ಷಿಸಲ್ಪಟ್ಟಿರುವ ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿರುವ ಪಂಚಲಿಂಗೇಶ್ವರ ದೇವಾಲಯವು ಮೂಲ ಸೌಕರ್ಯದಿಂದ ವಂಚಿತವಾಗಿರುವುದು ಎದ್ದು ಕಾಣುತ್ತಿದೆ.
ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಾಲಯವು ಕೆ.ಆರ್.ಪೇಟೆ ತಾಲೂಕು ಕೇಂದ್ರದಿಂದ ಸುಮಾರು ಹದಿನೆಂಟು ಕಿ.ಮೀ. ದೂರದಲ್ಲಿದ್ದು, ಹದಿಮೂರನೆಯ ಶತಮಾನದಲ್ಲಿ ನಿರ್ಮಿತವಾದ ದೇವಾಲಯವಾಗಿದ್ದು, ಹೊಯ್ಸಳ ವಾಸ್ತುಶೈಲಿಯ ಮನಮೋಹಕ ಕೆತ್ತನೆ ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ.
ದೇವಾಲಯವು ಭಕ್ತರು ಮಾತ್ರವಲ್ಲದೆ, ಪ್ರವಾಸಿಗರನ್ನು ಕೂಡ ತನ್ನತ್ತ ಸೆಳೆಯುತ್ತಿದ್ದು, ವಿವಿಧ ರೀತಿಯ ಆಕರ್ಷಣೆಗಳಿಗೆ ತವರು ನೆಲೆಯಾಗಿದೆ. ಪೌರಾಣಿಕ, ಐತಿಹಾಸಿಕವಾಗಿಯೂ ಹಲವು ಮಹತ್ವ ಹೊಂದಿರುವ ಈ ದೇವಾಲಯವು ಸುಂದರ ಶಿಲ್ಪಕಲೆಯನ್ನು ಅನಾವರಣಗೊಳಿಸಿದೆ. ಅಷ್ಟೇ ಅಲ್ಲದೆ ಇತರೆ ಐತಿಹಾಸಿಕ ದೇವಾಲಯಗಳ ನಡುವೆ ಒಂದಾಗಿ ಪ್ರವಾಸಿಗರ ಗಮನಸೆಳೆಯುತ್ತದೆ.
ಹದಿಮೂರನೇಯ ಶತಮಾನದಲ್ಲಿ ಅಂದರೆ ಕ್ರಿ.ಶ. 1238 ರಲ್ಲಿ ಹೊಯ್ಸಳ ವಾಸ್ತುಶೈಲಿಯಲ್ಲಿ ನಿರ್ಮಿತವಾದ ಶಿವನಿಗೆ ಮುಡಿಪಾದ ಸುಂದರ ದೇವಾಲಯ ಇದಾಗಿದೆ. ಹೊಯ್ಸಳ ದೊರೆವೀರ ಸೋಮೇಶ್ವರನ ಆಡಳಿತವಿದ್ದ ಸಂದರ್ಭದಲ್ಲಿ ನಿರ್ಮಿತವಾದ ಈ ದೇವಾಲಯ ಐದು ತತ್ವಗಳ ಶಿವಲಿಂಗವಿರುವ ಪಂಚಲಿಂಗೇಶ್ವರ ದೇವಾಲಯವಾಗಿದೆ ಅಮರಶಿಲ್ಪಿ ಜಕಣಾಚಾರಿಯ ಹಾಗೆಯೆ ಸಾಕಷ್ಟು ಪ್ರಸಿದ್ಧಿಗಳಿಸಿದ ರುವಾರಿ ಮಲ್ಲಿತಮ್ಮ ಎಂಬ ಅಸಾಮಾನ್ಯ ಶಿಲ್ಪಿಯು ಈ ದೇವಾಲಯದ ಪ್ರಮುಖ ಶಿಲ್ಪಗಾರನಾಗಿದ್ದು, ಹೊಯ್ಸಳರ ಅನೇಕ ದೇವಾಲಯಗಳಿಗೆ ಮಲ್ಲಿತಮ್ಮ ಶಿಲ್ಪಗಾರನಾಗಿ ಗಮನಸೆಳೆಯುತ್ತಾನೆ. ಕೆಲವು ಪ್ರಮುಖ ಇತಿಹಾಸಕಾರರ ಪ್ರಕಾರ ದೇಶದಲ್ಲಿ ಪಂಚಕೂಟ ದೇವಾಲಯಗಳು ಇರುವುದೇ ಬಲು ಅಪರೂಪ. ಅಂತÀಹ ವಿಶಿಷ್ಟತೆಗಳಿಗೆ ಪಂಚಕೂಟ ದೇವಾಲಯ ಸಾಕ್ಷಿಯಾಗಿ ನಿಂತಿದೆ ಎಂದರೆ ತಪ್ಪಾಗಲಾರದು.
ಈ ದೇಗುಲದಲ್ಲಿ ಕಂಡು ಬರುವ ವಿಶೇಷ ಶಿಲ್ಪಕಲೆಗಳ ಅಧ್ಯಯನಕ್ಕೆ ಮತ್ತು ಕೆತ್ತನೆಗಳನ್ನು ವೀಕ್ಷಿಸಲೆಂದೇ ಪ್ರವಾಸಿಗರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಶಿಲ್ಪಿಯು ಕೆತ್ತಿರುವ ಕೆತ್ತನೆ ಹಾಗೂ ಕಲಾನೈಪುಣ್ಯತೆ ನೋಡುಗರನ್ನು ಮೂಕಸ್ಮಿತರನ್ನಾಗಿಸುತ್ತದೆ. ಹಲವು ಸೂಕ್ಷ್ಮ ಶಿಲ್ಪಗಳ ಕೆತ್ತನೆಗಳನ್ನು ಈ ದೇಗುಲದಲ್ಲಿ ಕಾಣಬಹುದಾಗಿದೆ. ಹೀಗಾಗಿ ಭಕ್ತರು ಹಾಗೂ ಕಲಾ ಪ್ರೇಮಿಗಳು ಒಮ್ಮೆಯಾದರೂ ದೇಗುಲವನ್ನು ನೋಡುವ ಉದ್ದೇಶದಿಂದ ಇಲ್ಲಿಗೆ ಬರುತ್ತಿರುತ್ತಾರೆ.
ತನ್ನದೇ ಆದ ವಿಶೇಷತೆ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿ ಪ್ರಸಿದ್ಧವಾಗಿರುವ ಪಂಚಕೂಟ ದೇವಾಲಯವು ಭಾರತೀಯ ಪುರಾತತ್ವ ಇಲಾಖೆ ಸೇರಿದ್ದರೂ ಹಲವು ರೀತಿಯ ಮೂಲ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತವಾಗಿರುವುದರಿಂದ ಇಲ್ಲಿಗೆ ತೆರಳುವ ಪ್ರವಾಸಿಗರು ಹಿಡಿಶಾಪ ಹಾಕಿಕೊಂಡು ಹಿಂತಿರುಗುತ್ತಿರುತ್ತಾರೆ. ಪಾರಂಪರಿಕ ದೇವಾಲಯಕ್ಕೆ ಕನಿಷ್ಟ ಪ್ರಮಾಣದ ಅಗತ್ಯ ಸೌಕರ್ಯಗಳನ್ನು ಒದಗಿಸದೇ ಇರುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ. ಈ ದೇವಾಲಯದತ್ತ ಮುಜರಾಯಿ ಇಲಾಖೆ ಅಥವಾ ತಾಲ್ಲೂಕು ಆಡಳಿತ ಗಮನಹರಿಸಿ ಇಲ್ಲಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಪ್ರವಾಸಿಗರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆ.ಆರ್.ಪೇಟೆ ತಾಲೂಕು ಕೇಂದ್ರಕ್ಕೆ ದೇವಾಲಯವು ಹತ್ತಿರವಿದ್ದರೂ ಬಂದು ಹೋಗಲು ಕನಿಷ್ಟ ಸಂಖ್ಯೆಯ ಬಸ್ಗಳ ಸೌಕರ್ಯವಿಲ್ಲದಿರುವುದು ಪ್ರವಾಸಿಗರನ್ನು ಸಂಕಷ್ಟಕ್ಕೀಡು ಮಾಡಿದೆ. ಇನ್ನು ಈ ದೇವಾಲಯವನ್ನು ನೋಡಲು ಬರುವ ಪ್ರವಾಸಿಗರಿಗೆ ತಂಗಲು ಯಾತ್ರಿನಿವಾಸ್, ಉತ್ತಮ ಹೋಟೆಲ್ಗಳು ಇಲ್ಲದಿರುವುದು, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ, ವಾಹನಗಳ ಪಾರ್ಕಿಂಗ್ ಸೇರಿದಂತೆ ಯಾವುದೇ ಸೌಕರ್ಯಗಳು ಇಲ್ಲಿ ಇಲ್ಲದಿರುವುದರಿಂದ ದೇವಾಲಯವನ್ನು ನೋಡಲು ಬರುವ ಪ್ರವಾಸಿಗರು ಹಿಡಿಶಾಪ ಹಾಕಿಕೊಂಡು ಹಿಂತಿರುಗುತ್ತಾರೆ.
ಇನ್ನಾದರೂ ಸ್ಥಳೀಯರಾಗಿರುವ ರಾಜ್ಯದ ತೋಟಗಾರಿಕೆ ಮತ್ತು ಪೌರಾಡಳಿತ ರೇಷ್ಮೆ ಸಚಿವ ನಾರಾಯಣಗೌಡರು ತಮ್ಮ ಕ್ಷೇತ್ರದಲ್ಲಿರುವ ಈ ಐತಿಹಾಸಿಕ ದೇಗುಲಕ್ಕೆ ಕನಿಷ್ಟ ಪ್ರಮಾಣದ ಮೂಲಭೂತ ಸೌಕರ್ಯಗಳನ್ನಾದರೂ ಕಲ್ಪಿಸಬೇಕು ಎಂದು ಬೆಂಗಳೂರಿನಿಂದ ಆಗಮಿಸಿದ್ದ ಪ್ರವಾಸಿಗ ವೆಂಕಟೇಶ್ ಎಂಬುವರು ಆಗ್ರಹಿಸಿದ್ದಾರೆ.