ಮಂಡ್ಯ: ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರ ರೈತರೊಡನೆ, ಕೃಷಿ ತಜ್ಞರೊಡನೆ ಚರ್ಚಿಸದೆ ಸರ್ವಾಧಿಕಾರಿ ಧೋರಣೆಯಿಂದ ಜಾರಿ ಮಾಡಿರುವ ಮೂರು ಕಾಯಿದೆಗಳ ವಿರುದ್ಧ ರೈತ ಸಂಘಟನೆಗಳು ನಡೆಸಿದ ಭಾರತ್ ಬಂದ್ಗೆ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಬೆಂಬಲ ನೀಡಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ವಕೀಲ ಶಿವಶಂಕರ್ ಅವರು, ಕಳೆದ 10 ದಿನಗಳಿಂದ ಕೋಟ್ಯಂತರ ರೈತರು ಕೊರೆಯುವ ಚಳಿಯನ್ನು ಲೆಕ್ಕಿಸದೆ ತಮ್ಮ ಜೀವವನ್ನು ಪಣಕ್ಕಿಟ್ಟು ದೆಹಲಿಯ ಸುತ್ತಮುತ್ತ ಪ್ರತಿಭಟನೆ ನಡೆಸುತ್ತಿದ್ದರೂ ತುಘಲಕ್ ಧೋರಣೆಯಿಂದ ನಡೆದುಕೊಳ್ಳುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವರ್ತನೆ ಖಂಡನೀಯ ಎಂದು ಕಿಡಿಕಾರಿದರು.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಭರವಸೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿತ್ತು. ಆದರೆ ತನ್ನ ಪ್ರಣಾಳಿಕೆಯಲ್ಲಿ ಇಲ್ಲದಿದ್ದ ಈ ಕಾಯ್ದೆಗಳನ್ನು ಯಾರ ಒತ್ತಡಕ್ಕೆ ಮತ್ತು ಲಾಬಿಗೆ ಮಣಿದು ಜಾರಿ ಮಾಡಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಯಾವುದೇ ಸರಕಾರ ಇಂತಹ ಸರ್ವಾಧಿಕಾರಿ ಧೋರಣೆಯನ್ನು ಹೊಂದಲು ಸಾಧ್ಯವಿಲ್ಲ. ಸ್ವತಹ ರೈತರೇ ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಆದರೂ ಕಾಯ್ದೆ ಹಿಂಪಡೆಯಲು ಸರ್ಕಾರ ಸಿದ್ಧವಿಲ್ಲ ಎಂದರೆ ಖಂಡಿತವಾಗಿಯೂ ಇದು ದೊಡ್ಡ ದೊಡ್ಡ ಶ್ರೀಮಂತರು ಮತ್ತು ಉದ್ಯಮಿಗಳ ಹಿತಾಸಕ್ತಿಗಾಗಿ ರೂಪಿಸಿರುವ ಕಾಯ್ದೆಗಳು ಆಗಿರುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಅನ್ನದಾತನ ಭೂಮಿಯನ್ನು ಅಗ್ಗದ ಬೆಲೆಗೆ ಕಸಿದುಕೊಳ್ಳುವ, ರೈತ ಬೆಳೆದ ಬೆಳೆಯ ಮೇಲೆ ಉದ್ಯಮಿಗಳು ಹಿಡಿತ ಸಾಧಿಸುವ ಈ ಕಾಯ್ದೆಗಳು ಖಂಡಿತ ದೇಶದ ರೈತರನ್ನು ಬೀದಿಗೆ ತಳ್ಳುತ್ತವೆ. ಹಾಗಾಗಿ ಯಾವುದೇ ಬೆಲೆ ತೆತ್ತಾದರೂ ತನ್ನ ಭೂಮಿಯನ್ನು ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳುವ ರೈತರ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲಿಸಿ ಅನ್ನದಾತ ನೊಂದಿಗೆ ದೇಶದ ಜನ ನಿಲ್ಲಬೇಕು ಒತ್ತಾಯಿಸಿದರು.
ಹಾಗೆಯೇ ಸರ್ವಾಧಿಕಾರಿ ಧೋರಣೆಯನ್ನು ಹೊಂದಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ತಕ್ಕ ಪಾಠವನ್ನು ಮುಂದಿನ ದಿನಗಳಲ್ಲಿ ಕಲಿಸಬೇಕು ಎಂದು ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಗುಡುಗಿದರು.