ಕಾರವಾರ: ರಾಜ್ಯದಲ್ಲಿ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತಮ ಕೆಲಸ ಇಲಾಖೆಯಿಂದ ಆಗಿದೆ. ಅದರಂತೆ ಜಿಲ್ಲೆಯಲ್ಲಿ ಮಾದಕ ವಸ್ತು ಪ್ರಕರಣ ಬಗ್ಗೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ಡಿಜಿ ಪ್ರವೀಣ್ ಸೂದ್ ಹೇಳಿದ್ದಾರೆ.
ಕಾರವಾರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೆ ಆಗದಷ್ಟು ಕ್ರಮವನ್ನು ಈ ವರ್ಷ ಕೈಗೊಳ್ಳಲಾಗಿದೆ. ಕ್ರೈಂ ನಿಯಂತ್ರಣಕ್ಕೆ ಹಲವು ಕ್ರಮ ಇಲಾಖೆ ಕೈಗೊಂಡಿದೆ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಲಾಗಿದೆ. ಉತ್ತರ ಕನ್ನಡ ದೊಡ್ಡ ಜಿಲ್ಲೆಯಾಗಿದ್ದರಿಂದ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ. ಜಿಲ್ಲೆಯಲ್ಲಿ ಪೊಲೀಸ್ ವಸತಿ ಗೃಹದ ನಿರ್ಮಾಣದ ಬಗ್ಗೆ ಕ್ರಮಕೈಗೊಳ್ಳಲಾಗಿದ್ದ ಈಗಾಗಲೇ 219 ಮನೆ ನಿರ್ಮಾಣ ಮಾಡಲಾಗಿದೆ. ಮತ್ತೇ ಸರಾಸರಿ ಐದುನೂರು ಮನೆ ಹೆಚ್ಚುವರಿಯಾಗಿ ಬೇಕು ಎಂದು ಎಸ್ಪಿ ಕೇಳಿದ್ದಾರೆ. ಈ ಬಗ್ಗೆ ಸರಕಾರಕ್ಕೆ ವರದಿ ಕಳುಹಿಸಲಾಗಿದೆ. ಮತ್ತಷ್ಟು ಮನೆ ನೀರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಸಿವಿಲ್ ಪೊಲೀಸರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಏಪ್ರಿಲ್ ಮೊದಲವಾರದೊಳಗೆ ಶೇ.100ರಷ್ಟು ಆಕ್ತೆ ಪ್ರಕ್ರಿಯೆ ನಡೆಯಲಿದೆ ಎಂದರು.
ಕರಾವಳಿ ಭಾಗವಾದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಯುವ ಜನರು ಪೊಲೀಸ್ ಇಲಾಖೆಗೆ ಸೇರಲು ಇಚ್ಚಿಸುತ್ತಿಲ್ಲ. ಉತ್ತರ ಕರ್ನಾಟಕದವರು ಇಲಾಖೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ಕೆಲವು ವರ್ಷ ಕೆಲಸ ಮಾಡಿ ತಮ್ಮ ಜಿಲ್ಲೆಗೆ ತೆರಳುತ್ತಾರೆ.
ಇಲ್ಲಿನವರು ಇಲಾಖೆಗೆ ಬಂದರೆ ವರ್ಗಾವಣೆಗೆ ಈ ಸಮಸ್ಯೆ ಹೆಚ್ಚಿರುವುದಿಲ್ಲ. ಕರಾವಳಿಯ ಜನರು ಶೈಕ್ಷಣಿಕವಾಗಿ ಉತ್ತಮವಾಗಿರುವುದರಿಂದ, ಪೊಲೀಸ್ ಇಲಾಖೆಗೆ ಅಷ್ಟೇ ಅಲ್ಲದೆ ಸರಕಾರದ ಯಾವುದೇ ಇಲಾಖೆಗೂ ಸೇರಲು ಇಚ್ಛಿಸುತ್ತಿಲ್ಲ. ಕರಾವಳಿಯ ಜನರು ಇಲಾಖೆಗೆ ತರಲು ಹೆಚ್ಚಿನ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು ತರಬೇತಿ ಸಹ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.