ಚಾಮರಾಜನಗರ: ಎಲ್ಲೆಡೆ ಗ್ರಾಮ ಪಂಚಾಯ್ತಿ ಚುನಾವಣೆಯ ಪ್ರಚಾರದ ಕಾವು ಏರುತ್ತಿರುವಂತೆಯೇ ಗ್ರಾ.ಪಂ. ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಮಹಿಳೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕೂಡ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡರಾಯಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವವರನ್ನು ನಿಂಗರಾಜು(27) ಎಂದು ಗುರುತಿಸಲಾಗಿದೆ. ನಿಂಗರಾಜುವಿನ ಪತ್ನಿ ಗಗನಾ ಎಂಬುವವರು ಎರಡು ದಿನಗಳ ಹಿಂದೆಯಷ್ಟೇ ಗ್ರಾಮದ ಎರಡನೇ ವಾರ್ಡಿನಿಂದ ಕೂಡ್ಲೂರು ಗ್ರಾಮ ಪಂಚಾಯತ್ ಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ ನಿಂಗರಾಜು ನಿನ್ನೆ ರಾತ್ರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪತ್ನಿಯ ಅವಿರೋಧ ಆಯ್ಕೆಯಿಂದ ಸಂತಸದಿಂದ ಇರಬೇಕಾಗಿದ್ದ ಪತಿಯೇ ದುಡುಕಿನ ನಿರ್ದಾರ ಕೈಗೊಂಡು ಜೀವವನ್ನೆ ಕೊನೆಗಾಣಿಸಿಕೊಂಡಿರುವುದು ಇಡೀ ಕುಟುಂಬವನ್ನೆ ದುಃಖದ ಮಡಿಲಿಗೆ ನೂಕಿದೆ. ನಿಂಗರಾಜು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಗಗನಾ ನೀಡಿರುವ ದೂರಿನ ಮೇರೆಗೆ ಚಾಮರಾಜನಗರ ಪೂರ್ವ ಠಾಣೆ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ಸ್ಥಳ ಮಹಜರು ಮಾಡುತಿದ್ದಾರೆ.