ಮಂಡ್ಯ: ಗೆಳೆಯನೊಬ್ಬನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಮಗ, ಮದ್ಯಪಾನ ಮಾಡಿ ಮನೆಗೆ ಬಂದಿದ್ದರಿಂದ ಬೇಸರಗೊಂಡ ತಾಯಿ, ಮಗಳು ಹೇಮಾವತಿ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಂಡವಪುರ ತಾಲ್ಲೂಕಿನ ಅಮೃತಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರನ್ನು ಖಾದರ್ ಎಂಬವರ ಪತ್ನಿ ಸಲ್ಮಾಬಾನು (36), ಮಗಳು ಶಬಾನಾ ಬಾನು (16) ಎಂದು ಗುರುತಿಸಲಾಗಿದೆ.
ಕಳೆದ ಡಿ.12ರಂದು ರಾತ್ರಿ ಖಾದರ್ ಅವರ ಮಗ ಶಫಿಉಲ್ಲಾ (18) ತನ್ನ ಗೆಳೆಯನೊಬ್ಬನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದನು. ತನ್ನ ಮಗ ಮದ್ಯ ಸೇವಿಸಿದ್ದಾನೆ ಎಂದು ಬೇಸರಗೊಂಡ ತಾಯಿ ಸಲ್ಮಾ ಬಾನು ನೀನು ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿ ಕೆಟ್ಟ ಅಭ್ಯಾಸಗಳನ್ನು ಕಲಿತಿದ್ದೀಯಾ? ದೊಡ್ಡವನಾಗಿ ಹೇಗೆ ನಮ್ಮನ್ನು ಸಾಕುತ್ತೀಯಾ? ಎಂದು ಮಗನನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭ ತಾಯಿ ಮಗನ ಜತೆ ವಾಗ್ವಾದ ನಡೆದಿದೆ.
ಇದರಿಂದ ಬೇಸರಗೊಂಡಿದ್ದ ತಾಯಿ ಸಲ್ಮಾಬಾನು, ತಮ್ಮ ಮಗಳು ಶಬಾನಾಬಾನು ಜತೆ ಡಿಸೆಂಬರ್ 13ರಂದು ಬೆಳಿಗ್ಗೆ ಮನೆ ಬಿಟ್ಟು ಹೋಗಿದ್ದರು. ಈ ಸಂಭಂದ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ತಾಯಿ, ಮಗಳು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು.
ಆದರೆ, ಇವರು ಜಕ್ಕನಹಳ್ಳಿ ಸಮೀಪದ ಕಜ್ಜಿಕೊಪ್ಪಲು ಬಳಿ ಹರಿಯುವ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಿಗ್ಗೆ ನಾಗಮಂಗಲ ತಾಲ್ಲೂಕು ಗಂಗವಾಡಿ ಸಮೀಪದ ನಾಲೆಯಲ್ಲಿ ತಾಯಿ, ಮಗಳು ಇಬ್ಬರ ಶವ ಪತ್ತೆಯಾಗಿದೆ.