ಮಂಡ್ಯ: ಜಿಲ್ಲೆಯಲ್ಲಿ ಗ್ರಾಪಂ ಚುನಾವಣಾ ಕಾವು ಆರಂಭವಾಗಿದ್ದು, ಬಹಳಷ್ಟು ಗ್ರಾಪಂಗಳಲ್ಲಿ ಇದೊಂದು ಪ್ರತಿಷ್ಠೆಯ ಕಣವಾಗಿಯೂ ಗಮನಸೆಳೆಯುತ್ತಿದೆ. ಹೀಗಾಗಿ ಜಿಲ್ಲಾಡಳಿತ ತೀವ್ರನಿಗಾವಹಿಸಿ ನ್ಯಾಯ, ಮುಕ್ತ, ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಈ ನಡುವೆ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಲಾಳನಕೆರೆ ಗ್ರಾಮ ಪಂಚಾಯಿತಿಯ ಬಿದರಕೆರೆ ಕ್ಷೇತ್ರದ ಮೂರು ಸ್ಥಾನಗಳಿಗೆ ಕೆಲವೊಂದು ವ್ಯಕ್ತಿಗಳು ಈ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಲು ಹಣಕ್ಕಾಗಿ ಹರಾಜು ಪ್ರಕ್ರಿಯೆ ಮಾಡಿದ್ದು 44 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದ್ದು, ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮ ಪಂಚಾಯಿತಿಯ ಭೈರನಹಳ್ಳಿ ಕ್ಷೇತ್ರದ ಒಂದು ಸ್ಥಾನಕ್ಕೂ ಇದೇ ರೀತಿಯ ಹರಾಜು ಪ್ರಕ್ರಿಯೆ ನಡೆದಿದ್ದು, ಅಲ್ಲಿನ 12 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲು ಮಂಡ್ಯ ಮತ್ತು ಪಾಂಡವಪುರ ಉಪವಿಭಾಗಾಧಿಕಾರಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಅವರು ಸೂಚನೆ ನೀಡಿದ್ದಾರೆ.
ಇನ್ನೊಂದೆಡೆ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮದ್ದೂರು ತಾಲೂಕಿನ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಅಗತ್ಯವಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಚುನಾವಣೆ ವೇಳೆ ನಡೆಯುವ ಅಕ್ರಮ ಮತ್ತು ಅಪರಾಧ ತಡೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ತಾಲೂಕಿನ ಗೂಳೂರು, ನಂಬಿನಾಯಕನಹಳ್ಳಿ, ದೊಡ್ಡಹೊಸಗಾವಿ, ಕೋಡಿಹಳ್ಳಿ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಮನೆ ಕಳ್ಳತನ, ದ್ವಿಚಕ್ರ ವಾಹನ ಕಳವು, ಸರಗಳ್ಳತನ, ಮೇಕೆ, ಕುರಿ, ಜಾನುವಾರು ಕಳವುಗಳನ್ನು ತಪ್ಪಿಸಲು ಇದರಿಂದ ಸಾಧ್ಯವಾಗಲಿದೆ.
ಹೀಗಾಗಿಯೇ ಕೊಪ್ಪ ಪೊಲೀಸರು ಪ್ರತಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಆರ್ಥಿಕ ನೆರವನ್ನು ಪಡೆದು ಸುಮಾರು 20 ಕ್ಯಾಮೆರಾಗಳನ್ನು ಅಳವಡಿಸಿದ್ದು, ಮುಂದಿನ ದಿನಗಳಲ್ಲಿ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಅಪರಾಧ ತಡೆಗೆ ಮುಂದಾಗಲಿದ್ದಾರೆ. ಇಷ್ಟೇ ಅಲ್ಲದೆ ರಾತ್ರಿ ವೇಳೆ ಬಿಟ್ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಿದ್ದು ಹಾಗೂ ಅಗತ್ಯವಿರುವ ಗ್ರಾಮಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಗ್ರಾಮದ ಒಳ ಪ್ರವೇಶಿಸುವ ವಾಹನಗಳನ್ನು ನೋಂದಣಿ ಮಾಡಿ ತಪಾಸಣೆ ಕೈಗೊಳ್ಳುವ ಜತೆಗೆ ಅಪರಿಚಿತರ ಚಲನವಲನದ ಬಗ್ಗೆ ಹೆಚ್ಚಿನ ನಿಗಾಯಿಡಲಾಗಿದೆ.
ಇದೆಲ್ಲದರ ನಡುವೆ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿಗೆ ಆಯ್ಕೆ ಬಯಸಿ ಹರಳಹಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ ಪತಿ, ಪತ್ನಿ ಹಾಗೂ ಪುತ್ರ ಮೂವರು ನಾಮಪತ್ರ ಸಲ್ಲಿಸಿರುವುದು ಕುತೂಹಲ ಕೆರಳಿಸಿದೆ. ಕೆನ್ನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಳಹಳ್ಳಿ ಕ್ಷೇತ್ರದಿಂದ ಅಂಬರೀಶ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಅಂಬಿ ಸುಬ್ಬಣ್ಣ ಹಾಗೂ ಅವರ ಪತ್ನಿ ಸುಮಿತ್ರಾ ಹಾಗೂ ಪುತ್ರ ಅಭಿಷೇಕ್ ಮಂಗಳವಾರ ಚುನಾವಣಾಧಿಕಾರಿ ಎಸ್.ಪಿ.ಸೌಮ್ಯ ಹಾಗೂ ಸಹಾಯಕ ಚುನಾವಣಾಧಿಕಾರಿ ಸುನೀಲ್ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಅಂಬಿ ಸುಬ್ಬಣ್ಣ ಅವರು ಹರಳಹಳ್ಳಿ ಗ್ರಾಮದ 1ನೇ ವಾರ್ಡ್ನಿಂದ ಸಾಮಾನ್ಯ ವರ್ಗದಿಂದ ಸ್ಪರ್ಧೆ ಮಾಡಿದ್ದು, ಅವರ ಪತ್ನಿ ಸುಮಿತ್ರಾ ಅವರು ವಿಶ್ವೇಶ್ವರನಗರ ಬಡಾವಣೆಯ 3ನೇ ವಾರ್ಡ್ನಿಂದ ಬಿಸಿಎಂ ಬಿ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ಅವರ ಪುತ್ರ ಅಭಿಷೇಕ್ ಅವರು ಹರಳಹಳ್ಳಿ ಗ್ರಾಮದ 2ನೇ ವಾರ್ಡ್ನಿಂದ ಸಾಮಾನ್ಯ ವರ್ಗದಿಂದ ಸ್ಪರ್ಧೆ ಮಾಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದಲೂ ಮಾಜಿ ಸಚಿವ ಡಾ.ಎಂ.ಎಚ್.ಅಂಬರೀಶ್ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ಅಭಿಯಾಗಿರುವ ಅಂಬಿ ಸುಬ್ಬಣ್ಣ ಅವರು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಇದೀಗ ಸುಮಲತಾ ಅಂಬರೀಶ್ ಅವರ ಅಭಿಮಾನಿಗಳ ಪಡೆಯಿಂದ ಗ್ರಾ.ಪಂ ಚುನಾವಣೆಗೆ ತಮ್ಮ ಪತ್ನಿ ಹಾಗೂ ಪುತ್ರರ ಜತೆಗೂಡಿ ಸ್ಪರ್ಧೆ ಮಾಡಿರುವುದು ವಿಶೇಷವಾಗಿದೆ.