ಮದ್ದೂರು: ತಾಲೂಕಿನ ಬೆಸಗರಹಳ್ಳಿಯಲ್ಲಿ ಪೌರ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿರುವುದು ಗುರುವಾರ ಕಂಡು ಬಂದಿದ್ದು, ಸಾರ್ವಜನಿಕರಿಗೆ ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿಯ ಪೌರ ಕಾರ್ಮಿಕರು ಕಸ ವಿಲೇವಾರಿ, ಚರಂಡಿ, ರಸ್ತೆ ಹಾಗೂ ಬೀದಿಗಳನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ಗ್ಲೌಸ್, ಮಾಸ್ಕ್, ಬೂಟ್, ಸೇರಿದಂತೆ ಯಾವುದೇ ಸುರಕ್ಷತಾ ಸಾಧನೆಗಳನ್ನು ನೀಡದೆ ಬರಿ ಗೈ ಮತ್ತು ಕಾಲಿನಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿರುವುದು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕೊರೋನಾ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ನೀಡದೆ ಕೆಲಸ ಮಾಡಿಸಿಕೊಳ್ಳುವ ಮೂಲಕ ಪೌರ ಕಾರ್ಮಿಕರ ಜೀವದ ಜತೆಯಲ್ಲಿ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ.
ಹೆಸರೇಳದ ಪೌರ ಕಾರ್ಮಿಕರೊಬ್ಬರು ಮಾತನಾಡಿ, ಸರಿಯಾಗಿ ಸುರಕ್ಷತಾ ಸಾಧನಗಳನ್ನು ಕೊಡುತ್ತಿಲ್ಲ ಮತ್ತು ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನಾದರೂ ಸಂಬಂಧಿಸಿದ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳು ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ಪೌರ ಕಾರ್ಮಿಕರ ಆರೋಗ್ಯ ದೃಷ್ಠಿಯಿಂದ ಸುರಕ್ಷತಾ ಸಾಧನಗಳನ್ನು ಕೊಡಿಸುವ ಮೂಲಕ ಅವರಿಗೆ ಅನುಕೂಲ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.