ಚಾಮರಾಜನಗರ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಾರಿ ಎಂ ಜಿ ರೋಡ್, ಬ್ರಿಗೇಡ್ ರೋಡ್ ಮತ್ತು ರಾಜ್ಯದ ಎಲ್ಲಾ ಪ್ರವಾಸೀ ತಾಣಗಳಲ್ಲೂ ಹೊಸ ವರ್ಷಾಚರಣೆ ಮಾಡುವುದಕ್ಕೆ ನಿಷೇಧ ಹೇರಿದೆ.
ಇದೇ ಕಾರಣಕ್ಕೆ ರಾಜ್ಯ ಅರಣ್ಯ ಇಲಾಖೆಯೂ ಕೂಡ ಬಂಡಿಪುರ ಮತ್ತು ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಹೊಸವರ್ಷಾಚರಣೆಯ ಮೋಜು, ಮಸ್ತಿಗೆ ಕಡಿವಾಣ ಹಾಕಿದ್ದು ಎರಡು ದಿನಗಳ ಕಾಲ ಪ್ರವಾಸಿಗರ ವಾಸ್ತವ್ಯಕ್ಕೆ ಸಂಪೂರ್ಣ ನಿಷೇಧ ಹೇರಿದೆ.
ಪ್ರತೀ ವರ್ಷ ನೂರಾರು ಪ್ರವಾಸಿಗರು ಬಂಡೀಪುರ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ, ಈ ಬಾರಿ ಸಂಭ್ರಮಾಚರಣೆಗೆ ಅರಣ್ಯ ಇಲಾಖೆ ಬ್ರೇಕ್ ಹಾಕಿದೆ.
ಮುಂದಿನ ಡಿಸೆಂಬರ್ 31 ಹಾಗೂ ಜನವರಿ 1 ರಂದು ಪ್ರವಾಸಿಗರ ವಾಸ್ತವ್ಯಕ್ಕೆ ಸಂಪೂರ್ಣ ನಿಷೇಧ ಹೇರಿದ್ದು, ಬುಕಿಂಗ್ ನಿಲ್ಲಿಸಲಾಗಿದೆ. ವರ್ಷದ ಕೊನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು. ಪ್ರತೀ ಡಿಸೆಂಬರ್ 31 ರಂದು ವರ್ಷಾಚರಣೆಗೆ ಪ್ರವಾಸಿಗರ ಬುಕ್ಕಿಂಗ್ ಗಳಿಂದ ಕಾಟೇಜ್ ಮತ್ತು ಡಾರ್ಮೆಟರಿಗಳು ಭರ್ತಿಯಾಗುತ್ತಿತ್ತು. ಅರಣ್ಯ ಇಲಾಖೆ ಈ ಬಾರಿ ಎರಡು ದಿನಗಳ ಕಾಲ ಆನ್ಲೈನ್ ಮೂಲಕ ಬುಕ್ ಮಾಡುವುದನ್ನು ಬ್ಲಾಕ್ ಮಾಡಿದೆ. ಆದರೆ ಎಂದಿನಂತೆ ಇರಲಿರುವ ಬೆಳಿಗ್ಗೆ ಹಾಗೂ ಸಂಜೆ ಸಫಾರಿ ಇರಲಿದೆ.
ಇದಲ್ಲದೆ ಕೊಡಗು ಜಿಲ್ಲಾಡಳಿತವೂ ರಾಜಾ ಸೀಟ್ ನಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಹೇರಿದೆ. ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ನಿರ್ಬಂಧ ವಿಧಿಸಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ನೂತನ ವರ್ಷಾಚರಣೆಯಲ್ಲಿ ಪ್ರತೀ ವರ್ಷವೂ ರಾಜಾಸೀಟ್ ನಲ್ಲಿ ಸಾವಿರಾರು ಪ್ರವಾಸಿಗರು ಸೇರುತಿದ್ದರು. ಕೆಲವೊಮ್ಮೆ ಈ ರಸ್ತೆಯೇ ಜನಜಂಗುಳಿಯಿಂದ ಬ್ಲಾಕ್ ಆಗುತಿತ್ತು. ಕೊರೋನ ಕಾರಣದಿಂದ ಕಳೆದ ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಫಲ ಪುಷ್ಪ ಪ್ರದರ್ಶನವನ್ನೂ ರದ್ದು ಪಡಿಸಲಾಗಿತ್ತು.