ಮಡಿಕೇರಿ: ಇಲ್ಲಿಗೆ ಸಮೀಪದ ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಗ್ರಾಮದ ಪಶುವೈದ್ಯ ಆಸ್ಪತ್ರೆ ಕಟ್ಟದ ಹಿಂಭಾಗದಲ್ಲಿ ಕಾಡು ಹಂದಿಯನ್ನು ಸೆರೆಹಿಡಿಯಲು ಇಟ್ಟಿದ್ದ ಬಲೆಗೆ ಅಕಸ್ಮಾತ್ ಆಗಿ ಹುಲಿಯೊಂದು ಸೆರೆಯಾಗಿದೆ.
ಕಳೆದ ಹಲವು ದಿನಗಳಿಂದ ಬಾಳೆಲೆ ಭಾಗದಲ್ಲಿ ಹುಲಿಗಳು ಪಶುಗಳ ಮೇಲೆ ನಿರಂತರವಾಗಿ ದಾಳಿ ಮಾಡುತಿತ್ತು ಎನ್ನಲಾಗಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಗೂ ಸಾಕಷ್ಟು ಬಾರಿ ದೂರು ಕೊಟ್ಟಿದ್ದರು. ತೋಟಗಳಿಗೆ ಕಾಡು ಹಂದಿಗಳ ಉಪಟಳವೂ ಇತ್ತು. ಹೀಗಾಗಿ ಯಾರೋ ಹಂದಿ ಹಿಡಿಯಲು ತಂತಿ ಬಲೆ ಹಾಕಿದ್ದರು. ಇದಕ್ಕೆ ಹುಲಿ ಸಿಕ್ಕು ಬಿದ್ದಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಪಶು ವೈದ್ಯರು ಮತ್ತು ಅರಿವಳಿಕೆ ತಜ್ಞರೊಂದಿಗೆ ಸ್ಥಳಕ್ಕೆ ಧಾವಿಸಿದ್ದು ಅರಿವಳಿಕೆ ನೀಡಿ ಹುಲಿ ಸೆರೆ ಹಿಡಿದು ಪುನಃ ಬಂಡೀಪುರ ಅರಣ್ಯಕ್ಕೆ ಬಿಡಲಿದ್ದಾರೆ ಎಂದು ತಿಳಿದು ಬಂದಿದೆ. ಹುಲಿಯ ಪ್ರಾಯ ಅಂದಾಜು 8 ವರ್ಷ ಎನ್ನಲಾಗಿದೆ. ಇಲಾಖೆ ಅಧಿಕಾರಿಗಳು ಸ್ಥಳದಲ್ಲೆ ಕಾರ್ಯಚಣೆಯಲ್ಲಿ ತೊಡಗಿದ್ದಾರೆ.