ಮಂಡ್ಯ: ಕೋವಿಡ್-19 ರೋಗ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ವರದಿಯಾಗಿ ಪ್ರಪಂಚದ ಎಲ್ಲ ರಾಷ್ಟಗಳ ನಾಗರಿಕ ಸಮುದಾಯದ ಆರೋಗ್ಯ ಸ್ಥಿತಿಗತಿಯ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿ ಪ್ರಾಣ ಹಾನಿಗೂ ಕಾರಣವಾಗಿರುವುದರಿಂದ ಈ ವೈರಸ್ ಬಗ್ಗೆ ಹೆದರಿಕೆ ಬೇಡ ಆದರೆ ಜಾಗೃತಿ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಕಿವಿಮಾತು ಹೇಳಿದ್ದಾರೆ.
ಈ ಕುರಿತಂತೆ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು ಅಂತೆಯೇ ಭಾರತದಲ್ಲಿಯೂ ಸಹ ಕೋವಿಡ್ ಪ್ರಕರಣಗಳು ಸಹ ವರದಿಯಾದವು. ಮಂಡ್ಯ ಜಿಲ್ಲೆಯಲ್ಲಿಯೂ ಕೋವಿಡ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಮಂಡ್ಯ ಜಿಲ್ಲಾಡಳಿತದ ಸಕಾಲಿಕ ನಿರ್ಣಯಗಳು ಮತ್ತು ಅಂತರ್ ಇಲಾಖಾ ಸಮನ್ವಯತೆ ಹಾಗೂ ಆರೋಗ್ಯ ಇಲಾಖೆಯ ಉತ್ತಮ ನಿರ್ವಹಣೆಯಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣದಲ್ಲಿದೆ.
ಕೋವಿಡ್ ರೋಗ ಪ್ರಕರಣಗಳ ಕುರಿತು ಜಿಲ್ಲಾಡಳಿತ ಕೈಗೊಂಡ ದಿಟ್ಟ ಹಾಗೂ ಕಟ್ಟುನಿಟ್ಟಿನ ನಿರ್ಣಯಗಳಿಂದಾಗಿ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳಿಗೆ ತಕ್ಕಂತೆ ರೋಗಿಗಳನ್ನು ಪತ್ತೆ ಹಚ್ಚುವಿಕೆ ವರದಿಯಾದ ಪ್ರಕರಣಗಳಿಗೆ ಸಕಾಲಿಕ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ರೋಗಿಗಳಿಗೆ ಶುಚಿಯಾದ ಆಹಾರ ವಸತಿ ವ್ಯವಸ್ಥೆ ಮತ್ತು ರೋಗಿಯ ಸಂಪರ್ಕಕ್ಕೆ ಬಂದ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತ ವ್ಯಕ್ತಿಗಳಿಗೆ ಅಗತ್ಯ ಚಿಕಿತ್ಸೆ ವಸತಿ ಹಾಗೂ ಊಟದ ವ್ಯವಸ್ಥೆ, ಕಲ್ಪಿಸುವುದರ ಜೊತೆಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡುವುದರ ಮೂಲಕ ಕೊರೋನಾವನ್ನು ಯಶಸ್ವಿಯಾಗಿ ನಿಯಂತ್ರಿಸುವುದರಲ್ಲಿ ಇಡೀ ಜಿಲ್ಲಾಡಳಿತ ಸಮಗ್ರ ಹೋರಾಟವನ್ನು ಮಾಡಿದ ಪರಿಣಾಮವಾಗಿ ಇಂದು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿರುವುದಾಗಿ ಹೇಳಿದ್ದಾರೆ.
ಮುಖ್ಯವಾಗಿ ಸಾರ್ವಜನಿಕರಿಂದಲೂ ಜಿಲ್ಲಾಡಳಿತದ ಪರವಾಗಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಅಗತ್ಯ ಸಹಕಾರ ನೀಡಿದ ಕಾರಣದಿಂದ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು ಮುಂದುವರಿದು ಈಗಿನ ಪರಿಸ್ಥಿತಿಯಲ್ಲಿ ಕೊರೋನಾ ರೋಗದ ಹೊಸ ಪ್ರಭೇದದ ವೈರಸ್ ಈಗ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪ್ರಾರಂಭವಾಗಿದೆ ಎಂಬ ಮಾಹಿತಿ ಮೇರೆಗೆ ಜಿಲ್ಲಾಡಳಿತ ವತಿಯಿಂದಲೂ ಸಹ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಖ್ಯವಾಗಿ ಹೊಸ ಪ್ರಭೇದದ ವೈರಸ್ ತೀವ್ರವಾಗಿ ಹರಡುವಿಕೆಯನ್ನು ಹೊಂದಿದ್ದು ಎಲ್ಲಾ ವಯೋಮಾನದವರನ್ನು ಭಾದಿಸುವ ಕಾರಣ ವಿದೇಶದಿಂದ ಬಂದ ಪ್ರಯಾಣಿಕರ ಮೇಲೆ ವಿಶೇಷ ಗಮನ ಇರಿಸಲಾಗುತ್ತಿದೆ. ಜೊತೆಗೆ ಅವರಿಗೆ ಅಗತ್ಯ ಕ್ವಾರೆಂಟೈನ್ ಮಾಡಿಸಲಾಗುತ್ತಿದೆ ಮತ್ತು ಕೊರೋನಾ ರೋಗದ ವಿರುದ್ಧ ಇರುವ ಎಲ್ಲಾ ಅಗತ್ಯ ಶಿಷ್ಟಾಚಾರಗಳನ್ನು ಪಾಲಿಸಲಾಗುತ್ತಿದೆ. ಮುಖ್ಯವಾಗಿ ಈಗಿನ ಪರಿಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಎರಡನೇ ಹಂತದ ಸೋಂಕು ವರದಿಯಾಗಿರುವುದಿಲ್ಲ ಆದುದರಿಂದ ಈ ಬಗ್ಗೆ ಸಾರ್ವಜನಿಕರು ಅನಗತ್ಯ ಭಯಪಡುವ ಅವಶ್ಯಕತೆ ಇರುವುದಿಲ್ಲ ಆದರೆ ಈ ಹಿಂದೆ ಕೊರೋನಾ ರೋಗಕ್ಕೆ ವಹಿಸುತ್ತಿದ್ದ ಮುಂಜಾಗರೂಕತಾ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಲೇಬೇಕು, ಕೊರೋನಾ ಎರಡನೇ ಪ್ರಭೇದದ ವೈರಸ್ ಸೋಂಕು ಇಲ್ಲದಿದ್ದರೂ, ಮುಂದಿನ ದಿನಗಳಲ್ಲಿ ವರದಿಯಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪಾಲಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.