ಚಾಮರಾಜನಗರ: ಇದೀಗ ಎರಡನೇ ಹಂತದ ಗ್ರಾಮಪಂಚಾಯಿತಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಡಿ.22ರಂದು ಮೊದಲ ಹಂತದ ಗ್ರಾಮಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಆದರೆ ಚುನಾವಣಾ ಕರ್ತವ್ಯಕ್ಕೆ ಒಟ್ಟು 41 ಮತಗಟ್ಟೆ ಅಧಿಕಾರಿಗಳು ಗೈರು ಹಾಜರಿಯಾಗಿದ್ದು ಅವರಿಗೆ ಜಿಲ್ಲಾಧಿಕಾರಿಯವರಾದ ಡಾ.ಎಂ.ಆರ್. ರವಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ ಅಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ಜವಾಬ್ದಾರಿಯನ್ನು ಹೊರಿಸಲಾಗುತ್ತದೆ. ಅದರಲ್ಲೂ ಪ್ರಜಾಪ್ರಭುತ್ವದ ಆಧಾರ ಸ್ಥಂಭವಾಗಿರುವ ಗ್ರಾಪಂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದ ಅಧಿಕಾರಿಗಳು ಗೈರು ಹಾಜರಿಯಾಗಿರುವುದು ಅಚ್ಚರಿಯ ಸಂಗತಿಯಾಗಿದೆ. ಇದೀಗ ಗೈರು ಹಾಜರಿಯಾಗಿದ್ದ 41 ಮತಗಟ್ಟೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಮಾಡಿರುವುದರೊಂದಿಗೆ ನೋಟಿಸ್ ತಲುಪಿದ 24 ಗಂಟೆಯೊಳಗೆ ವಿವರಣೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡು ಗೈರುಹಾಜರಾದ ಓರ್ವ ಮತಗಟ್ಟೆ ಅಧಿಕಾರಿ, ಮೂವರು ಸಹಾಯಕ ಮತಗಟ್ಟೆಗೆ ಅಧಿಕಾರಿ ಹಾಗೂ 22 ಮಂದಿ ಪೆÇೀಲಿಂಗ್ ಅಧಿಕಾರಿಗಳಿಗೆ ಹಾಗೂ ಗುಂಡ್ಲುಪೇಟೆ ತಾಲೂಕು ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡು ಗೈರು ಹಾಜರಾದ ಮೂವರು ಮತಗಟ್ಟೆ ಅಧಿಕಾರಿ, ನಾಲ್ವರು ಸಹಾಯಕ ಮತಗಟ್ಟೆಗೆ ಅಧಿಕಾರಿ ಹಾಗೂ 8ಮಂದಿ ಪೋಲಿಂಗ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು ಅವರ ಉತ್ತರಕ್ಕಾಗಿ ಕಾಯಲಾಗುತ್ತಿದೆ.