ಮಂಡ್ಯ: ವೈಕುಂಠ ಏಕಾದಶಿ ಅಂಗವಾಗಿ ಜಿಲ್ಲೆಯ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಗುರುವಾರ ಸಂಜೆಯಿಂದಲೇ ದೇವಾಲಯಗಳಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ದೇವರಿಗೆ ಫಲಪಂಚಾಮೃತ ಅಭಿಷೇಕ, ಅಲಂಕಾರ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಕೋವಿಡ್-19 ಹಿನ್ನಲೆಯಲ್ಲಿ ಎಲ್ಲ ದೇವಾಲಯಗಳಲ್ಲೂ ಭಕ್ತರಿಗೆ ಕೊರೊನಾ ಮಹಾಮಾರಿ ತೊಲಗುವಂತೆ ಗೋವಿಂದನಾಮಸ್ಮರಣೆ ಮಾಡುವಂತೆ ಫಲಕಗಳನ್ನು ಅಳವಡಿಸಿದ್ದು ವಿಶೇಷವಾಗಿತ್ತು. ಬೆಳಗಿನಿಂದಲೇ ಭಕ್ತರು ದೇವಾಲಯಗಳಿಗೆ ತೆರಳಿ ತಮ್ಮ ಇಷ್ಠಾರ್ಥ ಸಿದ್ಧಿಗಾಗಿ ಶ್ರದ್ಧಾ-ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
ಮಂಡ್ಯ ನಗರದಲ್ಲಿರುವ ಶ್ರೀ ಲಕ್ಷ್ಮೀಜನಾರ್ದನಸ್ವಾಮಿ, ಶ್ರೀ ಶ್ರೀನಿವಾಸಸ್ವಾಮಿ, ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀಲಕ್ಷ್ಮೀವೆಂಕಟೇಶ್ವರ, ಶ್ರೀ ಶ್ರೀನಿವಾಸ ದೇವಸ್ಥಾನ, ಬೋವಿ ಕಾಲೋನಿಯಲ್ಲಿರುವ ಶ್ರೀ ವೆಂಕಟೇಶ್ವರ, ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಪಾಂಡುರಂಗಸ್ವಾಮಿ ದೇವಾಲಯಗಳಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು. ತಾಲೂಕಿನ ಸಾತನೂರು ಶ್ರೀ ಕಂಬದ ನರಸಿಂಹಸ್ವಾಮಿ, ಕಿರಗಂದೂರು ಶ್ರೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪ್ರಾತಃಕಾಲ ಬೆಳಗ್ಗೆ 4.30ಕ್ಕೆ ಮಹಾಭಿಷೇಕ ನಡೆಯಿತು. ಬೆಳಗ್ಗೆ 5.30ಕ್ಕೆ ಉಯ್ಯಾಲೋತ್ಸವ, ನಂತರ 6.30ಕ್ಕೆ ಮಹಾ ಮಂಗಳಾರತಿ ನಡೆಯಿತು.
ತಾಲ್ಲೂಕಿನ ಸಾತನೂರು ಶ್ರೀ ಕಂಬದ ನರಸಿಂಹಸ್ವಾಮಿ ದೇವಾಲಯಕ್ಕೆ ಶಾಸಕ ಎಂ.ಶ್ರೀನಿವಾಸ್ ಹಾಗೂ ಇನ್ನಿತರೆ ಗಣ್ಯರು ಭೇಟಿ ನೀಡಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಟ್ರಸ್ಟ್ನ ಅಧ್ಯಕ್ಷ ಎಸ್.ಪಿ. ಮಹೇಶ್, ಕಾರ್ಯದರ್ಶಿ ಕೆ.ಸಿ. ಶ್ರೀಕಾಂತ್, ಟ್ರಸ್ಟಿ ನರಸಿಂಹರಾಜು ಹಾಗೂ ದೇವಸ್ಥಾನ ಟ್ರಸ್ಟ್ ವತಿಯಿಂದ ಭಕ್ತರಿಗೆ ಲಾಡು, ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.