ಮಡಿಕೇರಿ: ಕಳೆದ 25 ನೇ ತಾರೀಖಿನಿಂದ ಮಂಜಿನ ನಗರಿಯಲ್ಲಿ ಆರಂಭಗೊಂಡಿರುವ ಹೆಲಿಕಾಫ್ಟರ್ ಜಾಲಿ ರೈಡ್ ನಿಂದಾಗಿ ಪುಟ್ಟ ಮಕ್ಕಳು ನೆಮ್ಮದಿಯಿಂದ ನಿದ್ರಿಸುವಂತ್ತಿಲ್ಲ, ವಯೋವೃದ್ಧರು ವಿಶ್ರಾಂತಿ ಪಡೆಯಲಾಗುತ್ತಿಲ್ಲ, ಕ್ರೀಡಾಪಟುಗಳಿಗೆ ಆಟದ ಮೈದಾನವಿಲ್ಲದಂತಾಗಿದೆ ಎಂದು ಜಿಲ್ಲಾ ಕ್ರೀಡಾಂಗಣ ವ್ಯಾಪ್ತಿಯ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಕ್ಕಲೆರ ಎ.ಕಾರ್ಯಪ್ಪ, ಎಂ.ಪಿ.ಕಾವೇರಪ್ಪ ಹಾಗೂ ಕೆ.ಕೆ.ತಿಮ್ಮಯ್ಯ ಮನೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ಆತಂಕವನ್ನು ಸೃಷ್ಟಿಸಿದೆ ಎಂದು ತಿಳಿಸಿದರು.
ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಸಿಟಿ ಬಸ್ ಮಾದರಿಯಲ್ಲಿ ಜಾಲಿ ರೈಡ್ ಹೆಸರಿನಲ್ಲಿ ಹೆಲಿಕಾಪ್ಟರ್ ಹಾರಾಡುತ್ತಿದೆ. ನಗರದ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಧಾರ್ಮಿಕ ಆಚಾರ, ವಿಚಾರಗಳ ಪ್ರಕಾರ ದೇವಾಲಯದ ಮೇಲೆ ಹೆಲಿಕಾಪ್ಟರ್ ಹಾರಾಡುವಂತ್ತಿಲ್ಲ. ಆದರೆ ಕಾನೂನು ಚೌಕಟ್ಟನ್ನು ಮೀರಿ ಹೆಲಿಕಾಫ್ಟರ್ ಹಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ ಎಂದು ಆರೋಪಿಸಿದರು.
ಜಾಲಿ ರೈಡ್ ಮಾಡಲಿ, ಆದರೆ ಜನರಿಗೆ ತೊಂದರೆ ನೀಡಬಾರದು, ಜೂನಿಯರ್ ಕಾಲೇಜು ಮೈದಾನಕ್ಕೆ ಬದಲಾಗಿ ಜನರಿಲ್ಲದ ಪ್ರದೇಶದಲ್ಲಿ ಅನುಮತಿ ನೀಡಬಹುದಾಗಿತ್ತು ಎಂದು ನಿವಾಸಿಗಳು ಹೇಳಿದರು. ಹೆಲಿ ರೈಡ್ ಮುಂದಿನ ಜನವರಿ ಒಂದರಂದು ಕೊನೆಗೊಳ್ಳಲಿದೆ.