ಬೀದರ್: ಬೀದರ್ ತಾಲೂಕಿನ ಕಪಲಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಪಲಾಪೂರ ಗ್ರಾಮದ ಚುನಾವಣೆ ಸಮಯದಲ್ಲಿ ಮತಗಟ್ಟೆ ಸಂಖ್ಯೆ-01 ರಲ್ಲಿ ಮತಯಂತ್ರದಲ್ಲಿನ ವಿರಳವಾದ ದೋಷವೊಂದು ಕಂಡುಬಂದ ಕಾರಣ ಮತದಾನ ಕೆಲಕಾಲ ಸ್ಥಗಿತಗೊಂಡಿತ್ತು.
ಗ್ರಾಮದ 2 ಬೂತ್ಗಳ ಪೈಕಿ ಒಂದು ಮತಕೇಂದ್ರದಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದು, ಮತಯಂತ್ರ ಕ್ರಮ ಸಂಖ್ಯೆ -6 ಬಟನ್ ಒತ್ತಿದರೆ ಬೇರೆ ಚಿಹ್ನೆಗೂ ಮತ ಬೀಳುತ್ತಿತ್ತು ಎಂದು ಹೇಳಲಾಗುತ್ತದೆ. ಈ ಬಗ್ಗೆ ಮತದಾರರೊಬ್ಬರು ಮತದಾನದ ಸಂದರ್ಭ ಮತಯಂತ್ರದ ವಿಡಿಯೋ ಮಾಡಿ ಇಬ್ಬರಿಗೆ ಮತ ಬೀಳುವ ಕೆಂಪು ದೀಪಗಳು ಉರಿಯುವುದನ್ನು ತೋರಿಸಿದ್ದಾರೆ.
ಇದನ್ನು ಗಮಿಸಿದ ಸ್ಥಳೀಯರು ತಕ್ಷಣವೇ ಮತದಾನವನ್ನು ಸ್ಥಗಿತಗೊಳಿಸಿ ಯಂತ್ರವನ್ನು ಬದಲಾಯಿಸುವಂತೆ ಆಗ್ರಹಿಸಿದರು. ಆ ಸಂದರ್ಭದಲ್ಲಿ ಮಾಡಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.