ಕಾಸರಗೋಡು: ಕೊರೋನಾ ಸೋಂಕು ಪ್ರಮಾಣ ಇಳಿಕೆಯಾಗಿದ್ದರೂ ನಿರ್ಲಕ್ಷಿಸುವಂತಿಲ್ಲ. ಮುನ್ನೆಚ್ಚರಿಗೆ, ಜಾಗ್ರತೆ ಅಗತ್ಯ ಎಂದು ಕೇರಳ ಆರೋಗ್ಯ ಸಚಿವೆ ಕೆ. ಕೆ. ಶೈಲಜಾ ಹೇಳಿದರು.
ಅವರು ಸೋಮವಾರ ಕಾಸರಗೋಡಿನಲ್ಲಿ ಆರೋಗ್ಯ ಇಲಾಖಾ ಅವಲೋಕನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮಾಸ್ಕ್ , ಸಾನಿಟೈಸರ್ ಬಳಕೆಯನ್ನು ಮುಂದಿನ ದಿನಗಳಲ್ಲೂ ಬಳಸಬೇಕು. ಸಭೆ, ಸಮಾರಂಭಗಳಿಗೆ ಕಡಿವಾಣ ಹಾಕಬೇಕು. ಜನ ಸೇರುವ ಕಾರ್ಯಕ್ರಮಗಳನ್ನು ಕೋವಿಡ್ ಮಾನದಂಡದಂತೆ ನಡೆಸಬೇಕು ಎಂದರು.
ರಾಜ್ಯದಲ್ಲಿ ಸಾವಿನ ಪ್ರಮಾಣ 0.36 ಕ್ಕೆ ಇಳಿಸಲು ಸಾಧ್ಯವಾಗಿದೆ. ವಿಶ್ವದಲ್ಲೇ ಕೇರಳದಲ್ಲಿ ಸಾವಿನ ಸಂಖ್ಯೆ ಕಡಿಮೆ. ಆರಂಭದಿಂದಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡ ಹಿನ್ನೆಲೆಯಲ್ಲಿ ಸಾವಿರಾರು ಮಂದಿಯ ಜೀವ ಉಳಿಸಲು ಸಾಧ್ಯವಾಗಿದೆ. ಈಗ ಕೊರೋನಾದ ಹೊಸ ರೂಪ ಕೆಲ ದೇಶಗಳಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಗಾ ಹಾಗೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಇದರಿಂದ ಬ್ರಿಟನ್ ಹಾಗೂ ದೇಶಗಳಿಂದ ಆಗಮಿಸುವವರ ತಪಾಸಣೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.