ಚಾಮರಾಜನಗರ: ಕೇಂದ್ರ ಮತ್ತು ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸೇರಿರುವಂತಹ ಆಸ್ತಿಗಳು ಕಬಳಿಕೆಯಾಗಿರುವುದನ್ನು ತೆರವುಗೂಳಿಸುವ ಕಾರ್ಯ ಆರಂಭವಾಗಿದ್ದು, ಇದೀಗ ಗುಂಡ್ಲುಪೇಟೆಯಲ್ಲಿ ವಕ್ಫ್ ಮಂಡಳಿಗೆ ಸೇರಿದ ಸುಮಾರು ಹದಿಮೂರು ಎಕರೆಯಷ್ಟು ಭೂಮಿಯನ್ನು ಪತ್ತೆ ಮಾಡಿರುವುದು ಬೆಳಕಿಗೆ ಬಂದಿದೆ.
ಹಾಗೆ ನೋಡಿದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಕಬಳಿಕೆಯಾಗಿದೆ ಎಂಬ ಆರೋಪಗಳು ಈ ಹಿಂದಿನಿಂದಲೂ ಕೇಳಿಬಂದಿತ್ತು. ಇದೇ ವೇಳೆ ಗುಂಡ್ಲುಪೇಟೆಯಲ್ಲಿಯೂ ವಕ್ಫ್ ಮಂಡಳಿಯ ಆಸ್ತಿ ಕಬಳಿಕೆಯಾಗಿರುವ ಬಗ್ಗೆ ಚಾಮರಾಜನಗರ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಜಿಲ್ಲಾ ಉಪಾಧ್ಯಕ್ಷ ಹೆಚ್.ಎಂ.ಸರ್ದಾರ್ ಸಂಬಂಧಿಸಿದವರ ಗಮನಸೆಳೆದಿದ್ದರು. ಅದರಂತೆ ಇದೀಗ ವಕ್ಫ್ ಮಂಡಳಿಯ ಸಲಹಾ ಸಮಿತಿಯ ಅಧಕ್ಷ ಅಪ್ಸರ್ ಪಾಷ ಅವರ ನಿರ್ದೇಶನದಂತೆ ಆಸ್ತಿಯನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡಲಾಗಿದೆ.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರೊಂದಿಗೆ ನಿಯೋಗ ತೆರಳಿ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯ ಹೊನ್ನೇಗೌಡನಹಳ್ಳಿ, ಭೀಮನಬೀಡು, ಬರಗಿ, ದೊಡ್ಡತುಪ್ಪೂರು, ತೊಂಡವಾಡಿ ಸೇರಿದಂತೆ ಗುಂಡ್ಲುಪೇಟೆ ಪಟ್ಟಣದಲ್ಲಿನ ವಕ್ಫ್ ನ ಹಲವಾರು ಆಸ್ತಿಗಳನ್ನು ಬೇರೆಯವರು ಅಕ್ರಮವಾಗಿ ಅನುಭವಿಸುತ್ತಿದ್ದರು. ಈಗ ಅವುಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗಿದ್ದು ಸುಮಾರು 13 ಎಕರೆಗಳಷ್ಟು ಆಸ್ತಿಗಳನ್ನು ಪತ್ತೆ ಮಾಡಲಾಗಿದೆ.
ಈ ವೇಳೆ ಮಾತನಾಡಿದ ವಕ್ಫ್ ಸಲಹಾ ಮಂಡಳಿಯ ಜಿಲ್ಲಾ ಉಪಾಧ್ಯಕ್ಷ ಸರ್ದಾರ್, ಗುಂಡ್ಲುಪೇಟೆಯ ಜಾಮೀಯಾ ಮಸೀದಿ ಕಮಿಟಿಯ ನಿರ್ಲಕ್ಷ್ಯದಿಂದಾಗಿ ಮತ್ತು ಇವರ ದುರಾಡಳಿತದಿಂದ ಇಂದು ವಕ್ಫ್ ಗೆ ಸೇರಬೇಕಾದ ಆಸ್ತಿಗಳನ್ನು ವರ್ಗಾವಣೆ ಮಾಡಿಕೊಳ್ಳದಿರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ವಕ್ಫ್ ಆಸ್ತಿಗಳನ್ನು ಬೇರೆಯವರು ಅನುಭವಿಸುವಂತಾಗಿದೆ ಎಂದರು.
ಹೊನ್ನೇಗೌಡನಹಳ್ಳಿಯ ಮುಸ್ಲಿಂ ಜನಾಂಗದ ಸುಮಾರು 3 ಎಕರೆ 20 ಗುಂಟೆಯ ಸ್ಮಶಾನದಲ್ಲಿ ಕೇವಲ ಆರು ಗುಂಟೆ ಮಾತ್ರ ಇದೆ, ಭೀಮನಬೀಡು ಗ್ರಾಮದಲ್ಲಿ 20 ಗುಂಟೆ, ಬರಗಿ ಗ್ರಾಮದ 3ಎಕರೆ 20 ಗುಂಟೆ, ಗೆಜೆಟ್ ನೋಟಿಫಿಕೇಷನ್ನಿನಲ್ಲಿರುವ ದೊಡ್ಡ ತುಪ್ಪೂರಿನ ಸುಮಾರು 5 ಎಕರೆ ಮೂರು ಗುಂಟೆ, ತ್ರಿಯಂಬಕಪುರ ಗ್ರಾಮದ 3 ಎಕರೆ 26 ಗುಂಟೆ ಜಮೀನು, ತೊಂಡವಾಡಿಯ 6 ಗುಂಟೆಯ ಈದ್ಗಾ ಮೈದಾನ ಸೇರಿದಂತೆ ಒಟ್ಟು 13.5 ಎಕರೆಗಳಷ್ಟು ಜಮೀನನ್ನು ಪತ್ತೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲಾಗುವುದಾಗಿ ತಿಳಿಸಿದರು. ಈ ವೇಳೆ ನಿರ್ದೇಶಕರಾದ ಮನ್ಸೂರ್ ಅಹಮದ್ ಹಾಗೂ ಮುಖಂಡರಾದ ಆರೀಫ್ ಪಾಷ ಇದ್ದರು.