ಮದ್ದೂರು: ಅಪರಿಚಿತ ದುಷ್ಕರ್ಮಿಗಳು ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು ಶಿಂಷಾ ನದಿಗೆ ಎಸೆದು ಪರಾರಿಯಾಗಿರುವ ಘಟನೆ ತಾಲೂಕಿನ ಹಳೇಹಳ್ಳಿ ಬಳಿ ಶಿಂಷಾ ಸೇತುವೆ ಬಳಿ ನಡೆದಿದೆ.
ತಾಲೂಕಿನ ಆತಗೂರು ಹೋಬಳಿ ನವಿಲೆ ಗ್ರಾಮದ ರವೀಂದ್ರ (45) ಎಂಬುವರೇ ಹತ್ಯೆಯಾದ ವಕೀಲ. ಮದ್ದೂರಿನ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ರವೀಂದ್ರ ಅವರು ಶನಿವಾರ ಬೆಳಗ್ಗೆ ಮನೆಯಲ್ಲಿ ಕಾಫಿ ಕುಡಿದು ಜಮೀನಿನ ಬಳಿಗೆ ಬೈಕ್ನಲ್ಲಿ ತೆರಳಿದ್ದಾರೆ. ಜಮೀನಿನಲ್ಲಿರುವ ಮರಗಳಿಂದ ಮೇಕೆಗಳಿಗೆ ಸೊಪ್ಪು ಕಿತ್ತು, ಬೈಕ್ಗೆ ಕಟ್ಟಿದ್ದಾರೆ. ನಂತರ ನಾಪತ್ತೆಯಾಗಿದ್ದಾರೆ.
ಮಧ್ಯಾಹ್ನವಾದರೂ ರವೀಂದ್ರ ಜಮೀನಿನಿಂದ ಮನೆಗೆ ಬಂದಿಲ್ಲ ಎಂದು ಮನೆಯವರು ಹುಡುಕಿಕೊಂಡು ಬಂದಾಗ ಅವರ ಬೈಕ್ ಇರುವುದು ಪತ್ತೆಯಾಗಿತ್ತು. ಸುತ್ತಮುತ್ತ ಹುಡುಕಾಡಿದರೂ ಯಾವುದೇ ಸುಳಿವು ಲಭ್ಯವಾಗಲಿಲ್ಲ. ಬಳಿಕ ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದು, ಸ್ಥಳಕ್ಕೆ ಧಾವಿಸಿದ ಪೆÇಲೀಸರು ಶಿಂಷಾ ನದಿಪಾತ್ರದಲ್ಲಿ ಹುಡುಕಾಡಿದರು. ಬಳಿಕ ನದಿಯಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ರಾತ್ರಿಯಾದ ಕಾರಣ ಪೊಲೀಸರು ವಾಪಸ್ಸು ಬಂದರು. ಸ್ಥಳೀಯರೊಬ್ಬರು ನದಿಯಲ್ಲಿ ಶವ ಇರುವ ಬಗ್ಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ನದಿಯಿಂದ ಶವವನ್ನು ಹೊರತೆಗೆದರು. ಶವದ ಮೈಮೇಲೆ ಯಾವುದೇ ಬಟ್ಟೆಗಳಿರಲಿಲ್ಲ. ಅದು ರವೀಂದ್ರ ಅವರದ್ದೇ ಎಂದು ದೃಢಪಟ್ಟಿತ್ತು. ದೇಹವನ್ನು ಪರಿಶೀಲನೆ ನಡೆಸಿದ ಬಳಿಕ ದೇಹದ ಮೇಲೆ ಹಲ್ಲೆ ನಡೆಸಿರುವ ಗುರುತು ಪತ್ತೆಯಾಗಿದ್ದು, ಶವ ನೀರಿನಿಂದ ಮೇಲೇಳದಂತೆ ಶವದ ಮೇಲೆ ಕಲ್ಲು ಚಪ್ಪಡಿ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದ ಅಂಶ ಬೆಳಕಿಗೆ ಬಂತು.
ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ತಮ್ಮ ಜಮೀನಿನ ಬಳಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದು, ಇದರ ಬಗ್ಗೆ ಮೃತ ರವೀಂದ್ರ ಆಕ್ಷೇಪ ವ್ಯಕ್ತಪಡಿಸಿ ಮರಳು ದಂಧೆಯವರ ವಿರೋಧ ಕಟ್ಟಿಕೊಂಡಿದ್ದರೆಂದು ಹೇಳಲಾಗಿದೆ. ಮತ್ತೊಂದು ಮೂಲದ ಪ್ರಕಾರ ಈ ಹಿಂದೆ ಮಹಿಳೆಯೊಬ್ಬಳ ಕೊಲೆ ವಿಚಾರವಾಗಿ ಪೊಲೀಸರಿಗೆ ದೂರು ನೀಡಿ ಊರಿನವರ ವಿರೋಧ ಕಟ್ಟಿಕೊಂಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಈ ಪ್ರಕರಣದಲ್ಲಿ ರವೀಂದ್ರ ಖುಲಾಸೆಯಾಗಿದ್ದರು. ಅಲ್ಲದೆ, ವಕೀಲರಾಗಿ ಸಾಕಷ್ಟು ದಲಿತಪರ ಹೋರಾಟಗಳಲ್ಲಿ ಭಾಗಿಯಾಗಿದ್ದು, ಈ ಹಿನ್ನಲೆಯಲ್ಲಿ ವಕೀಲ ರವೀಂದ್ರ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ.
ವಕೀಲ ರವೀಂದ್ರ ಅವರ ಕೊಲೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ತುಕಡಿಯನ್ನೂ ನಿಯೋಜಿಸಲಾಗಿದೆ.