ಬೇಲೂರು: ಸಮೃದ್ಧಿಯಾಗಿ ಬೆಳೆದ ಮುಸುಕಿನ ಜೋಳವನ್ನು ಕಟಾವು ಮಾಡಿದ ರಾಶಿಗೆ ಕಿಡಿಗೇಡಿಗಳು ಹಾಕಿದ ಬೆಂಕಿಯಿಂದ ಮುಸುಕಿನಜೋಳದ ತೆನೆ ಸಂಪೂರ್ಣವಾಗಿ ಕರಕಲಾಗಿದ್ದು, ಸರಿ-ಸುಮಾರು 3 ಲಕ್ಷಕ್ಕೂ ಅಧಿಕ ರೂಪಾಯಿಗಳು ನಷ್ಟವಾಗಿದ್ದು ರೈತ ತೀವ್ರ ಕಂಗಾಲಾಗಿರುವ ಘಟನೆ ನಡೆದಿದೆ.
ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಕೃಷಿಕ ಮಹಾದೇವಸ್ವಾಮಿ ತಮ್ಮ ನಾಲ್ಕು ಎಕರೆ ಭೂಮಿಯಲ್ಲಿ ಮುಸುಕಿನಜೋಳವನ್ನು ಅತ್ಯಂತ ಸಮೃದ್ಧವಾಗಿ ಬೆಳೆದು, ಕಳೆದ ವಾವಷ್ಟೇ ಕೂಲಿ ಕಾರ್ಮಿಕರು ಮತ್ತು ಕುಟುಂಬದವರು ಸೇರಿ ಕಟಾವು ಮಾಡಿ ಒಕ್ಕಣೆಗೆ ಎಂದೇ ರಾಶಿ ಹಾಕಲಾಗಿತ್ತು. ಒಕ್ಕಣೆ ಮಾಡಲು ಸದ್ಯ ಮುಸುಕಿನ ಜೋಳದ ಬೆಲೆ ತೀವ್ರವಾಗಿ ಇಳಿಮುಖ ಮತ್ತು ಮೋಡ ಮುಸುಕಿದ ವಾತಾವರಣ ಇರುವ ಕಾರಣದಿಂದಲೇ ಒಕ್ಕಣೆ ತಡವಾಗಿತ್ತು. ಇದೇ ವಾರದಲ್ಲಿ ಒಕ್ಕಣೆ ಮಾಡಿಸಬೇಕು ಎನ್ನ್ನುವ ಹೊತ್ತಿಗೆ ಕಿಡಿಗೇಡಿಗಳು ರಾತ್ರಿ ವೇಳೆ ಬೆಂಕಿ ಹಾಕಿದ ಪರಿಣಾಮ ಮೊದಲೇ ಒಣಗಿದ ಜೋಳದ ತೆನೆ ಬೆಂಕಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಬೆಂಕಿ ಜ್ವಾಲೆ ಕಂಡವರು ಕೂಡಲೇ ಅಗ್ನಿಶಾಮಕದಳಕ್ಕೆ ಪೋನ್ ಮಾಡಿದ್ದು, ಅಲ್ಪಸ್ವಲ್ಪ ಬೆಂಕಿ ನಂದಿಸಿದರೂ ಜೋಳದ ತೆನೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ನಾಲ್ಕು ಎಕ್ಕರೆ ಭೂಮಿಯಲ್ಲಿ ಉಳುಮೆ, ರಸಗೊಬ್ಬರ, ಕ್ರಿಮಿಕೀಟನಾಶಕ ಸೇರಿದಂತೆ ದುಬಾರಿ ಕೂಲಿ ಕಾರ್ಮಿಕರಿಂದ ಬೆಳೆಗೆ ಈಗಾಗಲೇ 1.5 ಲಕ್ಷ ರೂಗಳು ನಷ್ಟವಾಗಿದೆ. ಇದ್ದರಿಂದಲೇ ಬ್ಯಾಂಕ್ ಮತ್ತು ಸಣ್ಣಪುಟ್ಟ ಸಾಲ ಮತ್ತು ಕುಟುಂಬ ನಿರ್ವಹಣೆ ಮಾಡಬೇಕಿತ್ತು. ಅದರೆ ಫಸಲಿಗೆ ಬೆಂಕಿ ಅನಾಹುತದಿಂದ ನಮ್ಮ ಕುಟುಂಬದ ಸದಸ್ಯರು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ನೊಂದ ಕೃಷಿಕ ಮಹಾದೇವಸ್ವಾಮಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಲಿಂಗೇಶ್ ಮತ್ತು ತಾಲೂಕು ಪಂಚಾಯಿತ ಮಾಜಿ ಉಪಾಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್ ನೊಂದ ಕೃಷಿಕ ಮಹಾದೇವಸ್ವಾಮಿಗೆ ಧೈರ್ಯ ತುಂಬಿ. ಸರ್ಕಾರದಿಂದ ಸಾಧ್ಯದಷ್ಟು ಪರಿಹಾರ ನೀಡುವ ಭರವಸೆ ನೀಡಿದರು.