ಭದ್ರಾವತಿ: ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ. ಶ್ರೀಧರ ನಾಯ್ಕ್, ಕೂಡ್ಲಗೆರೆ ಪ್ರಭರ ಪಿಡಿಒ ಸತೀಶ್ ಗೌಡ.ಪಿ, ಕಂಬದಾಳ ಪ್ರಭಾರ ಪಿಡಿಒ ಅಹ್ಮದ್ ಅಲಿಯವರನ್ನ ಕರ್ತವ್ಯದಲ್ಲಿ ನಿರ್ಲಕ್ಷತೆ ಹಾಗೂ ಉದಾಸೀನತೆ ತೋರಿರುವ ಹಿನ್ನಲೆಯಲ್ಲಿ ಮೂವರನ್ನ ಅಮಾನತುಗೊಳಿಸಲಾಗಿದೆ.
ಜ.5 ರಂದು ನಡೆದ ಪಂಚಾಯಿತಿ ಅಭಿವೃದ್ಧಿ ಪರಿಶೀಲನೆ ಸಭೆಯಲ್ಲಿ, ಈ ಮೂರು ಅಧಿಕಾರಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಸೂಚಿಸಲಾಗಿದ್ದ ಕೆಲಸಗಳನ್ನ ಕೈಗೆತ್ತಿಕೊಳ್ಳಲಾಗದೆ ಉದಾಸೀನತೆ ಮತ್ತು ನಿರ್ಲಕ್ಷತನ ತೋರಿರುವ ಹಿನ್ನಲೆಯಲ್ಲಿ ಜಿಪಂ ಸಿಇಒ ವೈಶಾಲಿ ಎಂ.ಎಲ್. ರವರು ಇವರನ್ನ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ವಚ್ಛ ಸಂಕೀರ್ಣ ಘಟಕಗಳು, ಪಾಳು ಬಿದ್ದ ಕಟ್ಟಡ ಹಾಗೂ ಪಾಳು ಬಿದ್ದ ಜಾಗದಲ್ಲಿ ಶೆಡ್ ನಿರ್ಮಿಸಲಾಗಿದ್ದು, ಈ ಎಲ್ಲಾ ಕಟ್ಟಡಗಳನ್ನ ತೆರವುಗೊಳಿಸುವಂತೆ, ಗ್ರಾಮಗಳ ಕಸ ವಿಲೇವಾರಿಯೂ ಸಹ ಸೇರಿದಂತೆ ಒಟ್ಟು 7 ಸೂಚನೆಗಳನ್ನ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಿಂದ ಸೂಚಿಸಲಾಗಿತ್ತು.
ಮೇಲ್ನೋಟಕ್ಕೆ ಕಾಣುವಂತೆ ಈ ಸೂಚನೆಗಳನ್ನು ಪಾಲಿಸುವಲ್ಲಿ ಮೂರು ಅಧಿಕಾರಿಗಳು ನಿರ್ಲಕ್ಷತೆಯನ್ನು ತೋರಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸಿರುವುದಾಗಿ ತಿಳಿದುಬಂದಿದೆ. ನೌಕರರು ಅಮಾನತಿನಲ್ಲಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನದಿಂದ ಬಿಡಬಾರದು ಎಂದು ಆದೇಶಿಸಿದ್ದಾರೆ.