ತುಮಕೂರು: ಪ್ರಸ್ತುತ ಸಮಾಜದಲ್ಲಿ ವಿಜ್ಞಾನದ ಕುರಿತು ಸಾಕಷ್ಟು ಧ್ವಂಧ್ವಗಳಿವೆ. ವೈಜ್ಞಾನಿಕ ಮನೋಭಾವದಿಂದಲೇ ಇದನ್ನು ನಿವಾರಿಸಲು ಸಾಧ್ಯ. ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನದ ಕಾರ್ಯಕ್ರಮಗಳನ್ನೇರ್ಪಡಿಸುವುದು ಇದಕ್ಕೆ ಪೂರಕವಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಸಹಯೋಗದೊಂದಿಗೆ ಬುಧವಾರ ಆಯೋಜಿಸಲಾಗಿದ್ದ ವಿಜ್ಞಾನ ಪದವಿ ವಿದ್ಯಾರ್ಥಿಗಳು ಹಾಗೂ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ವಿಶ್ವವಿದ್ಯಾನಿಲಯದ ಮಟ್ಟದ ಅಂತರ ಕಾಲೇಜು ‘ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ’ಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಜೀವನವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ. ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸಿನಲ್ಲಿ ವಿಜ್ಞಾನದ ಚಟುವಟಿಕೆಗಳಿಗಾಗಿಯೇ 80 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಇದು ದೇಶದ ವಿವಿಧ ಕಾಲೇಜುಗಳಿಗೆ ಸ್ಫೂರ್ತಿದಾಯಕವಾಗಲಿದೆ ಎಂದರು.
ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯ ರಾಜ್ಯ ಸಂಯೋಜಕ ಹೆಚ್. ಎಸ್. ಟಿ. ಸ್ವಾಮಿ ಮಾತನಾಡಿ, ವಿಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸುವ ಉದ್ದೇಶವುಳ್ಳ ಕಾರ್ಯಕ್ರಮವನ್ನು ಕಳೆದ 15 ವರ್ಷಗಳಿಂದ ಯಶಸ್ವಿಯಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ಇದು ನೂರಾರು ವಿದ್ಯಾರ್ಥಿಗಳನ್ನು ಆಕರ್ಷಿಸಿದೆ ಎಂದರು.
ವಿವಿ ಮಟ್ಟದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳ ವಿವರ ಹೀಗಿದೆ- ಜೀವಶಾಸ್ತ್ರ ವಿಭಾಗ: ವರ್ಷಿಣಿ ಕೆ. ಜೆ. (ಪ್ರಥಮ), ಶ್ರೀಜನಿ ಹೆಚ್. ಕೆ. (ದ್ವಿತೀಯ); ರಸಾಯನಶಾಸ್ತ್ರ ವಿಭಾಗ: ತೇಜಸ್ವಿನಿ ಹೆಚ್. ಸಿ. (ಪ್ರಥಮ), ಪಲ್ಲವಿ ಎಸ್. ವಿ. (ದ್ವಿತೀಯ); ಗಣಿತಶಾಸ್ತ್ರ ವಿಭಾಗ: ವರ್ಷಿತ ಎಂ. ಎಸ್. (ಪ್ರಥಮ), ಕಾರ್ತಿಕ್ ಎಸ್. (ದ್ವಿತೀಯ); ಭೌತಶಾಸ್ತ್ರ ವಿಭಾಗ: ಪ್ರಿಯಾಂಕ ಚಕ್ರಧರ ಎಸ್. (ಪ್ರಥಮ), ತೇಜಸ್ವಿನಿ ಎಸ್. (ದ್ವಿತೀಯ). ಇವರು ರಾಜ್ಯಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ.
ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಶಾಲಿನಿ ಬಿ. ಆರ್. ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಶಿವಕುಮಾರ್, ಸ್ಪರ್ಧೆಯ ಸಂಯೋಜಕಿ ರಾಜಲಕ್ಷ್ಮಿ ಎ. ಗೋವನಕೊಪ್ಪ ಉಪಸ್ಥಿತರಿದ್ದರು.