ಕಾಸರಗೋಡು: ನವಜಾತ ಶಿಶುವನ್ನುಇಯರ್ ಫೋನ್ ಕೇಬಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆಗೈದ ದಾರುಣ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಕೃತ್ಯಕ್ಕೆ ಸಂಬಂಧಪಟ್ಟಂತೆ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ಚೆಡೆ ಕ್ಕಲ್ ನ ಶಾಫಿಯವರ ಪತ್ನಿ ಶಾಹಿನಾ(24) ಎಂದು ಗುರುತಿಸಲಾಗಿದೆ.
ಡಿ. 15 ರಂದು ಘಟನೆ ನಡೆದಿತ್ತು . ರಕ್ತಸ್ರಾವ ಉಂಟಾದ ಈಕೆಯನ್ನು ಕಾಸರಗೋಡಿನ ಆಸ್ಪತ್ರೆಯೊಂದಕ್ಕೆ ಕರೆತರಲಾಗಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಗಂಟೆಗಳ ಮೊದಲೇ ಹೆರಿಗೆಯಾಗಿದ್ದು, ಬಳಿಕ ರಕ್ತಸ್ರಾವ ಉಂಟಾಗಿರುವುದಾಗಿ ತಿಳಿದುಬಂತು. ಇದರಿಂದ ವೈದ್ಯರು ಮನೆಯಲ್ಲಿ ತಪಾಸಣೆ ನಡೆಸುವಂತೆ ಮನೆಯವರಿಗೆ ತಿಳಿಸಿದ್ದು, ಮನೆಗೆ ತಲಪಿ ಶೋಧ ನಡೆಸಿದಾಗ ಮಂಚದಡಿಯಲ್ಲಿ ವಸ್ತ್ರದಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ವರದಿಯಲ್ಲಿ ಕೇಬಲ್ ನಿಂದ ಬಿಗಿದು ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಹಿನ್ನಲೆಯಲ್ಲಿ ಈಕೆಯನ್ನು ವಿಚಾರಣೆ ನಡೆಸಿ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಳು.
ಹೆರಿಗೆಯಾದ ಮಾಹಿತಿ ಪತಿ ಹಾಗೂ ಮನೆಯವರಿಗೆ ಆಸ್ಪತ್ರೆಗೆ ತಲಪಿದ ಬಳಿಕವಷ್ಟೇ ತಿಳಿದು ಬಂದಿತ್ತು. ಇಯರ್ ಫೋನ್ ಕೇಬಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಗೈದಿರುವುದಾಗಿ ವಿಚಾರಣೆ ವೇಳೆ ಈಕೆ ಬಾಯ್ಬಿಟ್ಟಿದ್ದು, ಶಾಹಿನಾ, ಈಕೆಯ ಪತಿ , ಪತಿಯ ಹಾಗೂ ಕುಟುಂಬಸ್ಥರನ್ನು ಗುರುವಾರ ಠಾಣೆಗೆ ಕರೆಸಿದ್ದ ಪೊಲೀಸರು ಶಾಹಿನಾಳನ್ನು ಬಂಧಿಸಿ ದ್ದಾರೆ.
ಮೊದಲ ಮಗುವಾದ ಕೆಲ ತಿಂಗಳಲ್ಲೇ ಮತ್ತೆ ಗರ್ಭಿಣಿಯಾದುದರಿಂದ ಈ ಕೃತ್ಯ ನಡೆಸಿದ್ದು, ಈಕೆ ಗರ್ಭಿಣಿಯಾಗಿರುವುದು ಆಕೆಯ ಪತಿ ಮತ್ತು ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಇದರಿಂದ ಡಿ. 15ರಂದು ಮಗು ಹುಟ್ಟಿದ ಕೂಡಲೇ ಕೊಲೆ ಮಾಡಿರುವುದಾಗಿ ಈಕೆ ತಪ್ಪೊಪ್ಪಿಕೊಂಡಿದ್ದಾಳೆ.
ಗರ್ಭಿಣಿ ಎಂಬುದುದನ್ನು ಈಕೆ ಯಾರಲ್ಲೂ ಹೇಳಿರಲಿಲ್ಲ. ಮೊದಲ ಮಗುವಿಗೆ 1 ವರ್ಷ ಮೂರು ತಿಂಗಳಾಗಿದ್ದು, ಇಷ್ಟು ಬೇಗ ಮತ್ತೆ ಗರ್ಭಿಣಿಯಾಗಿರುವ ಬಗ್ಗೆ ಮನೆಯವರು ಹಾಗೂ ಉಳಿದವರು ಅವಹೇಳನ ಮಾಡುವ ಭಯದಿಂದ ಇದನ್ನು ಮುಚ್ಚಿಟ್ಟಿದ್ದೆ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.