ಚಾಮರಾಜನಗರ: ಚಾಮರಾಜನಗರದ ಹೊರ ವಲಯದ ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕ ಪ್ರದೇಶಕ್ಕೆ ನೀರು ಪೂರೈಸುವ ಕಾಮಗಾರಿಯನ್ನು 45 ದಿನದೊಳಗೆ ಪೂರ್ಣಗೊಳಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರು ಅಧಿಕಾರಿಗಳಿಗೆ ಗಡುವು ನೀಡಿದರು.
ಚಾಮರಾಜನಗರ ಜಿಲ್ಲೆಯ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಚಿವರು ಚಾಮರಾಜನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೈಗಾರಿಕಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೈಗಾರಿಕೋದ್ಯಮಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶದ ಅಭಿವೃದ್ದಿಗೆ ಸಂಬಂಧಿಸಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಬಾಕಿ ಉಳಿಸಬಾರದು. ಮೂಲ ಸೌಲಭ್ಯ ಸಕಾಲದಲ್ಲಿ ದೊರೆಯದಿದ್ದಲ್ಲಿ ಬಂಡವಾಳ ಹೂಡಿ ಕೈಗಾರಿಕೆಗಳನ್ನು ಪ್ರಾರಂಭಿಸುವವರಿಗೆ ತೊಂದರೆ ಉಂಟಾಗುತ್ತದೆ. ಬದನಗುಪ್ಪೆ – ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಪ್ರಗತಿಯಲ್ಲಿರುವ ಕಾಮಗಾರಿಯನ್ನು 45 ದಿನದೊಳಗೆ ಮುಗಿಸುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು ಎನ್ನುವ ಸಲಹೆಗೆ ಸೂಕ್ತವಾಗಿ ಸ್ಪಂದಿಸಿದ ಸಚಿವರು ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಹಾಗೂ ಜಿಲ್ಲೆಯ ಇನ್ನಿತರೆ ಭಾಗಗಳಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.