ಶಿವಮೊಗ್ಗ: ಇ.ಎಸ್.ಐ. ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನ, ಜೋಗ ಅಭಿವೃದ್ಧಿ ಹಾಗೂ ಸಕ್ರೆಬೈಲು ಅಭಿವೃದ್ಧಿಗೆ ಸರ್ಕಾರದ ಅನುಮೋದನೆ ದೊರೆತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ನವುಲೆಯ 5 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 100 ಹಾಸಿಗೆಗಳ ಇ.ಎಸ್.ಐ. ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ. 71.27 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
16.01.2021ರೊಳಗೆ ಟೆಂಡರ್ ಸ್ವೀಕರಿಸಲು ಕಡೆಯ ದಿನಾಂಕವನ್ನು ನಿಗಧಿಪಡಿಸಲಾಗಿದೆ . 15 ತಿಂಗಳುಗಳೊಳಗೆ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮುಗಿಸುವ ನಿಬಂಧನೆ ವಿಧಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ಕಾರ್ಮಿಕರು ಶಿವಮೊಗ್ಗದಲ್ಲಿಯೇ ಆತ್ಯಾದುನಿಕ ಚಿಕಿತ್ಸೆ ಪಡೆಯುವ ಕನಸು ನನಸಾಗುವ ಕಾಲ ಹತ್ತಿರ ಬಂದಿರುವುದಾಗಿ ಅವರು ತಿಳಿಸಿದ್ದಾರೆ.
ಸಕ್ರೆಬೈಲು ಅನೆ ಬಿಡಾರದ ಸಮಗ್ರ ಅಭಿವೃದ್ಧಿ:
ನಗರಕ್ಕೆ ಸಮೀಪವಿರುವ ಸಕ್ರೆಬೈಲು ಅನೆ ಬಿಡಾರ ಇಗಾಗಲೆ ಪ್ರವಾಸಿಗರ ಆಕರ್ಷಿಕತಾಣವಾಗಿದ್ದು. ಇದರ ಸಮಗ್ರ ಅಭಿವೃದ್ಧಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಪ್ರವಾಸೋಧ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸುವ ಸಂಸದ ಶ್ರೀ ಬಿ.ವೈ. ರಾಘವೇಂದ್ರರವರ ಯೋಚನೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಅನುಮೋದನೆಯನ್ನು ನೀಡಿದೆ. ಇದರಿಂದಾಗಿ ಉದ್ದೇಶಿತ ಸಕ್ರೇಬೈಲು ಆನೆ ಬಿಡಾರವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದರ ಮೂಲಕ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನೆರವಾಗುತ್ತದೆ ಎಂಬುದಾಗಿ ಸಂಸದರು ತಿಳಿಸಿದರು.
165 ಕೋಟಿ ವೆಚ್ಚದಲ್ಲಿ ಜೋಗ್ ಸಮಗ್ರ ಅಭಿವೃದ್ಧಿ:
ವಿಶ್ವ ವಿಖ್ಯಾತ ಜೋಗಜಲಪಾತ ಅಭಿವೃದ್ಧಿಗೆ ಕಂಕಣಬದ್ದರಾಗಿ ಶ್ರಮಿಸುತ್ತಿರುವ ಸಂಸದ ಶ್ರೀ ಬಿ.ವೈ. ರಾಘವೇಂದ್ರರವರ ಭಗೀರಥ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ರೂ. 165.00 ಕೋಟಿ ವೆಚ್ಚದಲ್ಲಿ 24 ಕಾಮಗಾರಿಗಳೊಂದಿಗೆ ಸಮಗ್ರ ಅಭಿವೃದ್ದಿಪಡಿಸಲಾಗುತ್ತಿದೆ.
ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದರಿಂದಾಗಿ ಬೃಹತ್ ಪ್ರವೇಶದ್ವಾರ, ವಿಜ್ಞಾನ/ಮಕ್ಕಳ ಉದ್ಯಾನವನ, ಉಪಹಾರ ಗೃಹ, ವಿಶ್ರಾಂತಿ ಕೊಠಡಿ, ಇತ್ಯಾದಿ ಜೋಗ ಜಲಪಾತ ಅಭಿವೃದ್ಧಿ, ರೋಪ್ ವೇ ನಿರ್ಮಾಣ, ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರದಿಂದ ಜಲಪಾತದ ಕೆಳಹಂತದವರೆಗೆ ಸಂಪರ್ಕ, ಬ್ಯಾರೇಜ್, ಬೋಟಿಂಗ್ ಮತ್ತು ವ್ಯೂ ಡೆಕ್ ನಿರ್ಮಾಣ,
ವಾಹನ ನಿಲ್ದಾಣ ಸೌಲಭ್ಯ, ಹೋಂ ಸ್ಟೇ, ಮಹಾತ್ಮಗಾಂಧಿ ಜಲವಿದ್ಯುತ್ ಕೇಂದ್ರ ಮತ್ತು ಮ್ಯೂಸಿಯಂಗೆ ಟ್ರಾಲಿ ಮೂಲಕ ಪ್ರವಾಸ, ತಲಕಳಲೆಯಲ್ಲಿ ಜಲಕ್ರೀಡೆ ಇತ್ಯಾದಿ ಹಲವಾರು ಅಭಿವೃದ್ಧಿ ಕಾರ್ಯಗಳು ಅನುಷ್ಟಾನಗೊಳ್ಳಲಿದೆ, ವಿಶ್ವ ವಿಖ್ಯಾತ ಜೋಗ ಜಲಪಾತವು ಇನ್ನಷ್ಟು ಆಕರ್ಷಣೀಯವಾಗಿ ಪ್ರವಾಸಿಗರನ್ನು ಸೆಳೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.