ಮಂಡ್ಯ: ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿದ್ದಾರೆ. ರೈತರು ಭರದ ಸಿದ್ಧತೆಯಲ್ಲಿ ತೊಡಗಿದ್ದರೆ, ವರುಣನ ಕೃಪೆಯಿಂದ ಈ ಬಾರಿ ಬೆಳೆಯನ್ನು ಕೈ ಸೇರಿಸಿಕೊಂಡಿರುವ ರೈತರು ಸಂತಸದಲ್ಲಿದ್ದು, ಸಂಕ್ರಾಂತಿಗೆ ವಿಶೇಷ ಕಳೆ ಬಂದಿದೆ.
ನಗರದ ಪೇಟೆ ಬೀದಿ, ಹಳೇ ಎಂಸಿ.ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ತರಕಾರಿ ಮಾರುಕಟ್ಟೆ ರಸ್ತೆಗಳು ಜನಜಂಗುಳಿಯಿಂದ ತುಂಬಿಹೋಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ಜನರು ಹಬ್ಬದ ಸಾಮಾನುಗಳ ಖರೀದಿಯಲ್ಲಿ ನಿರತರಾಗಿದ್ದಾರೆ. ರೈತರು ಜಾನುವಾರುಗಳಿಗೆ ಹೊಸ ಹಗ್ಗ, ಕರಿದಾರ, ಗೆಜ್ಜೆ, ಕೊರಳಿಗೆ ಕಟ್ಟುವ ಗಂಟೆ, ಗೊಂಡದ ಹಾರ, ಚಗರೆಯಿಂದ ಮಾಡಿದ ಹಗ್ಗ ಸೇರಿದಂತೆ ಅವುಗಳನ್ನು ಸಿಂಗರಿಸುವ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರೆ, ಗ್ರಾಮೀಣ ಮಹಿಳೆಯರು ಹಣ್ಣು, ತರಕಾರಿ, ಹೂವು, ಹಬ್ಬಕ್ಕೆ ಬೇಕಾದ ದಿನಸಿ ಸಾಮಗ್ರಿಗಳು, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಬೆಲ್ಲದ ಅಚ್ಚು, ಜೀರಿಗೆ ಕಾಳು, ಕಲ್ಯಾಣ ಸೇವೆ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಕೊಳ್ಳುವಲ್ಲಿ ಮಗ್ನರಾಗಿದ್ದರು.
ಪೇಟೆ ಬೀದಿಯ ಪ್ರಮುಖ ಸ್ಥಳಗಳಲ್ಲಿ ಎಳ್ಳು-ಬೆಲ್ಲ ವ್ಯಾಪಾರದ ಭರಾಟೆ ಜೋರಾಗಿತ್ತು. ಸಕ್ಕರೆ ಅಚ್ಚು, ಬೆಲ್ಲದ ಅಚ್ಚು, ಜೀರಿಗೆ ಕಾಳು, ಕಲ್ಯಾಣಸೇವೆಗೆ ವ್ಯಾಪಾರದ ಭರಾಟೆ ಜೋರಾಗಿತ್ತು. ಸಂಕ್ರಾಂತಿಯ ಮತ್ತೊಂದು ವಿಶೇಷ ಕಬ್ಬು. ಕಬ್ಬಿನ ಜೊಲ್ಲೆಗಳನ್ನು ಇಟ್ಟುಕೊಂಡು ರೈತರು ವ್ಯಾಪಾರದಲ್ಲಿ ನಿರತರಾಗಿದ್ದರು. ಸೊಗಸಾಗಿ ಬೆಳೆದು ಕಬ್ಬಿನ ರಸವನ್ನು ತುಂಬಿಕೊಂಡಿದ್ದರು. ಗ್ರಾಮೀಣ ಪ್ರದೇಶದ ಜನರು ಹಬ್ಬದ ಮುನ್ನಾ ದಿನವಾದ ಬುಧವಾರ ಜಾನುವಾರುಗಳ ಮೈ ತೊಳೆದು, ಕೊಂಬುಗಳನ್ನು ಸವರಿ ನುಣುಪಾಗಿಸಿ ವಿಶೇಷ ಮೆರುಗು ಬರುವಂತೆ ಮಾಡುವ ಕಾರ್ಯ ನಡೆಸಿದ್ದರು. ದನ-ಕರುಗಳನ್ನು ಸಿಂಗಾರಕ್ಕೆ ಸಿದ್ಧತೆ ನಡೆಸುತ್ತಾ, ಕಿಚ್ಚು ಹಾಯಿಸುವ ಕ್ಷಣಕ್ಕೆ ಎದುರು ನೋಡುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಮಹಿಳೆಯರು ಎಳ್ಳು-ಬೆಲ್ಲ ತಯಾರಿಯಲ್ಲಿ ತೊಡಗಿಸಿಕೊಂಡು ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದರೆ, ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಹಬ್ಬದ ಸಂಭ್ರಮಕ್ಕೆ ಪಾರವೇ ಇಲ್ಲದಾಗಿದೆ. ಹೆಣ್ಣು ಮಕ್ಕಳು ಹೊಸಬಟ್ಟೆಯನ್ನು ತೊಟ್ಟು, ಎಳ್ಳು-ಬೆಲ್ಲ ವಿನಿಮಯ ಮಾಡುವ ಸಂಭ್ರಮ ಕಂಡು ಬರುತ್ತಿದೆ.